ಮೋದಿ ವೈಫಲ್ಯ ಮರೆಮಾಚಲು ಬಿಜೆಪಿಯಿಂದ ನಕಲಿ ಟೂಲ್ ಕಿಟ್ : ರಮಾನಾಥ ರೈ
ಮಂಗಳೂರು : (ಮೇ.22) ಕೊರೋನಾ ಎರಡನೇ ಅಲೆಯನ್ನು ಸರಿಯಾಗಿ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಸರಕಾರ ವಿಫಲ ಆಗಿರುವುದನ್ನು ಮರೆಮಾಚಲು ಭಾರತೀಯ ಜನತಾ ಪಾರ್ಟಿ ನಕಲಿ ಟೂಲ್ ಕಿಟ್ ಕಥೆಕಟ್ಟಿ ನಾಚಿಗೇಡಿನ ಕುಕೃತ್ಯವೆಸಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಟೀಕಿಸಿದ್ದಾರೆ.
ಸೋಶಿಯಲ್ ಮಿಡಿಯಾ ಟ್ವಿಟ್ಟರ್ ಈಗಾಗಲೇ ಬಿಜೆಪಿಯ ಜೋಕರ್ ಮತ್ತು ವಕ್ತಾರ ಸಂಬಿತ್ ಪಾತ್ರ ಅವರ ‘ಟೂಲ್ ಕಿಟ್’ ಟ್ವೀಟ್ ‘ ತಿರುಚಲ್ಪಟ್ಟಿರುವ ಮೀಡಿಯಾ’ ಎಂದು ಹೇಳಿದ್ದು, ಬಿಜೆಪಿ ತನ್ನ ಸಕಲ ವೈಫಲ್ಯಗಳನ್ನು ಮುಚ್ಚಿಹಾಕಲು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅತ್ಯಂತ ನೀಚಮಟ್ಟಕ್ಕೆ ಇಳಿದಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
‘ದಿ ವೈರ್’ ಮತ್ತು ‘ಆಲ್ಟ್ ನ್ಯೂಸ್’ ನಂತಹ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಈಗಾಗಲೇ ಬಿಜೆಪಿಯ ಮುಖಂಡರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳಿವೆ. ಬಿಜೆಪಿ ಪ್ರಚಾರಕ್ಕೆ ತಂದಿರುವ ಟೂಲ್ ಕಿಟ್ ಕಟ್ಟುಕಥೆಯಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರ ಇಲ್ಲ. ಬಿಜೆಪಿ ಇಂತಹ ಅನೈತಿಕ ಕೃತ್ಯದ ಮೂಲಕ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ. ಸುಳ್ಳು ಮತ್ತು ಅಪಪ್ರಚಾರದ ಮೂಲಕವೇ ಅಧಿಕಾರಕ್ಕೆ ಬಂದಿರುವ ಬಿಜೆಪಿಯಂತಹ ರಾಜಕೀಯ ಪಕ್ಷ ಜನಾಭಿಪ್ರಾಯ ಮತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಯಾವ ಮಟ್ಟಕ್ಕೂ ಇಳಿಯಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂದು ರಮಾನಾಥ ರೈ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement
ಕಾಂಗ್ರೆಸ್ ಪಕ್ಷದ ಮಂಚೂಣಿ ಸಂಘಟನೆಗಳು, ಮುಖಂಡರು, ಕಾರ್ಯಕರ್ತರು ತಮ್ಮ ಪ್ರದೇಶಗಳಲ್ಲಿ ಶಕ್ತಿ ಮೀರಿ ಕೋವಿಡ್ ನಿಯಂತ್ರಣ ಕಾರ್ಯಗಳು, ವೈದ್ಯಕೀಯ ನೆರವು ಮತ್ತು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಯುವ ಕಾಂಗ್ರೆಸ್ ಮುಖಂಡರು ಕೊರೋನಾ ಪರಿಹಾರ ಕಾರ್ಯದಲ್ಲಿ ನಿರತವಾಗಿರುವುದು ಎಲ್ಲರಿಂದಲೂ ಪ್ರಸಂಶೆ ಗಳಿಸುತ್ತಿದೆ. ಕಾಂಗ್ರೆಸ್ ಸಂಘಟನೆಗಳ ಜನಪರ ಸೇವೆಯನ್ನು ಸಹಿಸಲಾರದೆ ಬಿಜೆಪಿ ಇಂತಹ ನೀಚ ಕೃತ್ಯ ನಡೆಸಿದೆ ಎಂದವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ‘ಟೂಲ್‌ಕಿಟ್’ ಸಿದ್ಧಪಡಿಸಿದೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಅನಂತರ, ಬಿಜೆಪಿಯ ಮುಖಂಡರು ಕಾಂಗ್ರೆಸ್ ಪಕ್ಷ ಸರಕಾರದ ಎದುರು ಸುಳ್ಳು ಪ್ರಚಾರದಲ್ಲಿ ತೊಡಗಿದರು. ಕಾಂಗ್ರೆಸ್ ಪಕ್ಷ ಬಿಜೆಪಿ ಮುಖಂಡರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ನಕಲಿ ದಾಖಲೆಗಳನ್ನು ಟ್ವೀಟ್ ಮಾಡಿರುವ ಸಂಬಿತ್ ಪಾತ್ರಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವು ಬಿಜೆಪಿ ನಾಯಕರ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಬೇಕು. ನಕಲಿ ಟೂಲ್ ಕಿಟ್ ಮೂಲಕ ಬಿಜೆಪಿ ಮಾಡಿರುವ ಆರೋಪ, ಅಪಪ್ರಚಾರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಲಿದ್ದು, ಬಿಜೆಪಿ ಕುತಂತ್ರಗಳನ್ನು, ಆಡಳಿತ ವೈಫಲ್ಯವನ್ನು ಜನಸಾಮಾನ್ಯರಿಗೆ ಕಾಂಗ್ರೆಸ್ ಕಾರ್ಯಕರ್ತರು ಮನವರಿಕೆ ಮಾಡಲಿದ್ದಾರೆ ಹೇಳಿದ್ದಾರೆ.

Advertisement
ತಾವೇ ಸೃಷ್ಟಿಸಿದ ‘ನಕಲಿ ಟೂಲ್‌ಕಿಟ್’ ಮೂಲಕ ಸ್ಥಳೀಯ ಸಂಸದರು ಕಾಂಗ್ರೆಸ್ ಪಕ್ಷದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಬುದ್ಧಿಗೇಡಿತನದ ಪರಮಾವಧಿಯಾಗಿದೆ. ಬಿಜೆಪಿ ಮುಖಂಡರು ಅಪಪ್ರಚಾರ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಡೆಸುತ್ತಿರುವ ಕೀಳು ಮಟ್ಟದ ರಾಜಕೀಯ ದೇಶದ ಇತರ ರಾಜಕೀಯ ಪಕ್ಷಗಳು ಕೂಡ ನಾಚಿಕೆಪಡುವಂತೆ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ದೇಶದ ಗೌರವಕ್ಕೆ ಕುಂದು ತರುವಂತದು ಎಂದು ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.