ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಬಿಹಾರ ಕಾಂಗ್ರೆಸ್‌ನಲ್ಲೂ ಒಡಕಿನ ಧ್ವನಿ

ಪಟ್ನಾ : (ಮಾ.16) ಮಧ್ಯ ಪ್ರದೇಶದ ನಂತರ ಕಾಂಗ್ರೆಸ್‌ನ ಕೇಂದ್ರ ನಾಯಕತ್ವಕ್ಕೆ ಬಿಹಾರದಲ್ಲಿಯೂ ಆಘಾತ ತರುವ ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷದ ರಾಜ್ಯ ಘಟಕದಲ್ಲಿಯೂ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಶಾಸಕರ ಗುಂಪೊಂದು ಆಡಳಿತಾರೂಢ ಜೆಡಿಯುನ ಸಂಪರ್ಕದಲ್ಲಿದೆ ಎಂಬ ಮಾತುಗಳು ಕಾಂಗ್ರೆಸ್‌ ವರಿಷ್ಠರ ನಿದ್ದೆಗಡಿಸಿದೆ.

Patna

ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ 26ಶಾಸಕರನ್ನು ಹೊಂದಿದೆ. ಈ ಪೈಕಿ ಅರ್ಧಕ್ಕೂ ಅಧಿಕ ಸಂಖ್ಯೆಯ ಶಾಸಕರು ಪಕ್ಷ ತೊರೆಯುವ ಸಂದೇಶ ರವಾನಿಸಿದ್ದಾರೆ. ಪಕ್ಷದಲ್ಲಿ ಈಗ ಹೇಳಿಕೊಳ್ಳುವಂಥ ಭಿನ್ನಮತವೇನೂ ಇಲ್ಲ. ಆದರೆ, ಪಕ್ಷಾಂತರ ನಿಷೇಧ ಕಾನೂನಿನ ಪ್ರಹಾರದಿಂದ ತಪ್ಪಿಸಿಕೊಳ್ಳಲು ಬೇಕಾದ ಅಗತ್ಯ ಸಂಖ್ಯೆಯಷ್ಟು ಶಾಸಕರು ಜೆಡಿಯು ಸಖ್ಯಕ್ಕೆ ಹಾತೊರೆಯುತ್ತಿರುವುದು, ರಾಜ್ಯದಲ್ಲಿ ಕಾಂಗ್ರೆಸ್‌ ಇಬ್ಭಾಗವಾಗುವ ಸೂಚನೆ ನೀಡಿದೆ.

ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಇಂತಹ ಸಮಯದಲ್ಲಿಯೇ ಪಕ್ಷದ ಶಾಸಕರು ಭಿನ್ನ ಹಾದಿ ತುಳಿಯಲು ಮುಂದಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಈ ಭಿನ್ನಮತೀಯ ಶಾಸಕರು ಜೆಡಿಯುಗೆ ಸೇರಿ ಬಾಣದ ಗುರುತಿನೊಂದಿಗೆ ಕಣಕ್ಕಿಳಿಯಲು ಇಲ್ಲವೇ ತಮ್ಮದೇ ಗುಂಪು ರಚಿಸಿಕೊಂಡು, ನಿತೀಶ್‌ ಕುಮಾರ್‌ ಬಣದೊಂದಿಗೆ ಮೈತ್ರಿಗೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!