ಕರಾವಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ “ಕೈ” ಕಾಳಗ

ಬೆಂಗಳೂರು (ದ.01): ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಿರೀಕ್ಷೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣ ಮತ್ತೆ ಗರಿಗೆದರಿದೆ. ನಾಯಕರುಗಳು, ಬೆಂಬಲಿಗರು ತಮ್ಮ ತಮ್ಮ ನಾಯಕರುಗಳ ಪರವಾದ ವಾದ- ಪ್ರತಿವಾದಗಳನ್ನು ನಡೆಸುತ್ತಾ ಅಭ್ಯರ್ಥಿತನವನ್ನು ಜೀವಂತ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಬೆಳ್ಳಿಪ್ಪಾಡಿ ರಮಾನಾಥ ರೈ

ಜಿಲ್ಲೆಯ ಹಿರಿಯ ನಾಯಕರಾಗಿರುವ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಯವರು ಕಳೆದ ಚುನಾವಣೆಯಲ್ಲಿ ಸೋಲುಂಡವರು. ಆದರೂ ಕ್ಷೇತ್ರದ ಜನರ ಸಂಪರ್ಕ ಕಳೆದುಕೊಂಡಿಲ್ಲ. ಅವರಿಗೆ ಟಿಕೆಟ್ ತಪ್ಪಿಸಲು ಅಲ್ಪಸಂಖ್ಯಾತ ಶಾಸಕರ ತಂಡ ತನ್ನ ಸಹೋದರನ ಮೂಲಕ ಶತಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ರಾಜ್ಯದ ಮತ್ತು ರಾಷ್ಟ್ರೀಯ ನಾಯಕರು ರಮಾನಾಥ ರೈ ಪರ ವಿಪರೀತ ಗೌರವಹೊಂದಿದ್ದು ಟಿಕೆಟ್ ಸಿಗುವುದು ಖಚಿತವಾಗಿದೆ ಎಂಬ ಮಾಹಿತಿ ಇದೆ. ರಾಕೇಶ್ ಮಲ್ಲಿ ಸಹ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಯಿಂದ ಹಾಲಿ ಶಾಸಕರು ರಾಜೇಶ್ ನಾಯ್ಕ್ ಕಣಕ್ಕಿಳಿಯಲಿದ್ದಾರೆ.

G krishnappa

ಜಿ. ಕೃಷ್ಣಪ್ಪ

ಸುಳ್ಯದಲ್ಲಿ ಸತತ ನಾಲ್ಕು ಬಾರಿ ಸೋಲುಂಡಿರುವ ಕಾಂಗ್ರೆಸ್ ಅಭ್ಯರ್ಥಿ ಡಾ| ರಘು ಬದಲಾಗಿ ಹಲವಾರು ವರುಷಗಳಿಂದ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿರುವ ರಾಮಕುಂಜದಲ್ಲಿ ವಾಸವಾಗಿರುವ ಜಿ. ಕೃಷ್ಣಪ್ಪ ರಿಗೆ ಅವಕಾಶ ನಿಚ್ಚಳವಾಗಿದೆ. ನಂದಕುಮಾರ್ ಹೆಸರೂ ಕೇಳಿ ಬರುತ್ತಿದೆ. ಬಿಜೆಪಿಯಿಂದ ಸತತ 6 ಬಾರಿ ಶಾಸಕರಾಗಿ ಸಧ್ಯ ಸಚಿವರಾಗಿರುವ ಅಂಗಾರರ ಬದಲಾಗಿ ಹೊಸ ಮುಖ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

Hemanath shetty

ಹೇಮನಾಥ ಶೆಟ್ಟಿ ಕಾವು

ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಕಣವಾಗಿರುವ ಪುತ್ತೂರು ಕ್ಷೇತ್ರದಲ್ಲಿ ಶಕುಂತಲಾ ಶೆಟ್ಟಿ, ಕಾವು ಹೇಮನಾಥ್ ಶೆಟ್ಟಿ, ವಿಶ್ವನಾಥ ರೈ, ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ, ಎಂ.ಎಸ್. ಮೊಹಮ್ಮದ್, ಡಾ. ರಾಜರಾಂ, ಮಮತಾ ಗಟ್ಟಿ, ಸತೀಶ್ ಕೆಡೆಂಜಿ, ದಿವ್ಯಪ್ರಭ, ಕೃಪಾ ಅಮರ್ ಆಳ್ವ, ಪ್ರಸಾದ್ ಕೌಶಲ್ ಶೆಟ್ಟಿ ಹಾಗೂ ಚಂದ್ರಹಾಸ ಶೆಟ್ಟಿ ಹೀಗೆ ಹಲವರು ಕೆಪಿಸಿಸಿ ಗೆ ಅರ್ಜಿ ಸಲ್ಲಿಸಿದ್ದಾರೆ.

Shakuntala shetty

ಶಕುಂತಲಾ ಟಿ. ಶೆಟ್ಟಿ

ಹೊಸ ಮುಖಗಳಿಗೆ ಅವಕಾಶ ಎಂದು ಕೆಪಿಸಿಸಿ ಅಧ್ಯಕ್ಷರ ಮಾತಿನಂತೆ ಎರಡು ಬಾರಿ ಕಾಂಗ್ರೆಸ್ ನಿಂದ ಅವಕಾಶ ಪಡೆದು ಇದೀಗ ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡಿರುವ ಮಾಜಿ‌ ಶಾಸಕಿ‌ ಶಕುಂತಲಾ ಶೆಟ್ಟಿಗೆ ಅವಕಾಶ ಕ್ಷೀಣಿಸಿದೆ. ತನ್ನೊಂದಿಗಿದ್ದ ಸ್ವಾಭಿಮಾನಿಗಳೇ ವಿರೋಧಿಗಳಾಗಿ ಬದಲಾಗಿರುವುದು ಇವರಿಗೆ ನೆಗೆಟಿವ್ ಆಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಗೌಡ ಸಮಾಜದ ಹಿರಿಯ ಸ್ವಾಮೀಜಿ‌ಯವರು ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷದಿಂದ ಗೌಡ ಸಮಾಜದವರು ಟಿಕೆಟ್ ಪಡೆದರೆ ನಮ್ಮೊಳಗೆ ವಿರೋಧವಾಗುತ್ತದೆ, ಅದನ್ನು ತಪ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಸಂಜೀವ ಮಠಂದೂರು ಅವರೇ ಸ್ಪರ್ಧಿಸುವುದರಿಂದ ಗೌಡ ಸಮುದಾಯದವರಿಗೆ ಅವಕಾಶ ಕಡಿಮೆ. ಅಲ್ಲದೆ ಈ ಜಿಲ್ಲೆಯಲ್ಲಿ ಮಾತ್ರ ಬಂಟ ಸಮುದಾಯಕ್ಕೆ ಅವಕಾಶ ಇರುವುದರಿಂದ ಮತ್ತು ಗೌಡ ಸಮುದಾಯಕ್ಕೆ ಕರ್ನಾಟಕದ ಇತರೇ ಕಡೆ ಸುಮಾರು 40 ಸೀಟು ನೀಡುವುದರಿಂದ ಜಿಲ್ಲೆಯಲ್ಲಿ ಅವರಿಗಿರುವ ಅವಕಾಶ ಕಡಿಮೆ. ಬಿಲ್ಲವ ಸಮುದಾಯಕ್ಕೂ ಉಡುಪಿ ಮತ್ತು ಬೆಳ್ತಂಗಡಿ ಯಲ್ಲಿ ಅವಕಾಶವಿರುವುದರಿಂದ ಪುತ್ತೂರಲ್ಲಿ ನಿರೀಕ್ಷೆ ಇಲ್ಲ. ಉಳಿದಿರುವುದು ಬಂಟ ಸಮುದಾಯದ ಐವರು ಅದರಲ್ಲಿ ಚಂದ್ರಹಾಸ ರೈ ಬ್ಯಾಂಕಿನಿಂದ ಇತ್ತೀಚೆಗೆ ನಿವೃತ್ತಿಯಾಗಿರುವುದು, ಅವರದ್ದು ಸುಳ್ಯ ಕ್ಷೇತ್ರ, ಅಲ್ಲದೇ ಅವರಿಗೆ ಕ್ಷೇತ್ರದಲ್ಲಿ ಜನಬಲವಿಲ್ಲ. ವಿಶ್ವನಾಥ ರೈ ಅವರೂ ನಿವೃತ್ತ ಬ್ಯಾಂಕ್ ಉದ್ಯೋಗಿ ಇತ್ತೀಚೆಗೆ ಶಕುಂತಲಾ ಶೆಟ್ಟಿ ಬಲದಿಂದ ಬ್ಲಾಕ್ ಅಧ್ಯಕ್ಷರಾದವರು ಪಕ್ಷಕ್ಕೆ ಹೊಸಬರಾಗಿರುವುದರಿಂದ ಅವಕಾಶ ಕಡಿಮೆ.

Krupa alva

ಡಾ| ಕೃಪಾ ಅಮರ್ ಆಳ್ವ

ಕೃಪಾ ಅಮರ್ ಆಳ್ವಾ ರಾಜ್ಯ ನಾಯಕರೊಂದಿಗೆ ಒಡನಾಟ ಹೊಂದಿರುವವರು ಆದರೆ ಅವರ ಕ್ಷೇತ್ರ ಮಂಗಳೂರು ಅವರಿಗೂ ಪುತ್ತೂರು ಕ್ಷೇತ್ರದ ಅರಿವಿಲ್ಲ ಎನ್ನುವುದು ಸ್ಪಷ್ಟ. ಅಲ್ಪಸಂಖ್ಯಾತರಿಗೆ ಜಿಲ್ಲೆಯ ಮತ್ತು ರಾಜ್ಯದ ಹಲವೆಡೆ ಅವಕಾಶ ಸಿಗಲಿದೆ. ಮತ್ತು ಪುತ್ತೂರಿನಲ್ಲಿ ಅಷ್ಟೋಂದು ವರ್ಚಸ್ಸು ಹೊಂದಿರುವ ನಾಯಕರು ಇಲ್ಲ ಎನ್ನಲಾಗುತ್ತಿದೆ.

Anitha hemanath shetty

ಅನಿತಾ ಹೇಮನಾಥ ಶೆಟ್ಟಿ

ಹೇಮನಾಥ್ ಶೆಟ್ಟಿ ನಿತ್ಯ ನಿರಂತರ ಜನರ ಸಂಪರ್ಕಕ್ಕೆ ಸಿಗುವ ನಾಯಕ, ಸುಮಾರು 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸೇವೆ ಮಾಡುತ್ತಾ ಬಂದವರು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಾಯಕರು ವಹಿಸಿದ ಎಲ್ಲಾ ಕೆಲಸವನ್ನು ಚಾಚೂ ತಪ್ಪದೆ ನೆರವೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಕೃಷಿ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಸಾಧಕರಾಗಿರುವುದರಿಂದ ಹೇಮನಾಥ್ ಶೆಟ್ಟಿಯವರಿಗೆ ಅವಕಾಶ ನಿಚ್ಚಳವಾಗಿದೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ತೇಲಿಬರುತ್ತಿರುವ ಮಾತುಗಳು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿಯವರ ಪರವಾಗಿಯೂ ಪಕ್ಷದ ಒಲವಿದೆ ಎಂದು ಹೇಳಲಾಗುತ್ತಿದೆ.

UT Khader

ಯು.ಟಿ. ಖಾದರ್

ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ನಲ್ಲಿ ಹಾಲಿ ಶಾಸಕ ಯು ಟಿ ಖಾದರ್ ಪಕ್ಕಾ. ಬಿಜೆಪಿಯಿಂದ ಸಂತೋಷ್ ಶೆಟ್ಟಿ ಬಹುತೇಕ ಖಚಿತ. ಮಂಗಳೂರು ಉತ್ತರದಿಂದ ವಿಧಾನಪರಿಷತ್ ಮಾಜಿ ಸದಸ್ಯ ಕಾಂಗ್ರೆಸ್ ಅಭ್ಯರ್ಥಿ ಐವಾನ್ ಡಿಸೋಜರಿಗೆ ಅವಕಾಶ ಹೆಚ್ಚು, ಬಿಜೆಪಿ ಯಿಂದ ಹಾಲಿ ಶಾಸಕ ವೇದವ್ಯಾಸ ಕಾಮತ್ ಖಚಿತ.

Ivan d'sousza

ಐವನ್ ಡಿ’ಸೋಜಾ

ಸುರತ್ಕಲ್ ಕ್ಷೇತ್ರದಿಂದ ಕ್ಷೇತ್ರದಾದ್ಯಂತ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ಇನಾಯತ್ ಆಲಿಗೆ ಸಾಧ್ಯತೆ, ಮಾಜಿ ಶಾಸಕ ಮೊಯಿದಿನ್ ಬಾವ ವರ್ಚಸ್ಸು ಕ್ಷೀಣಿಸಿದೆ. ಬಿಜೆಪಿಯಿಂದ ಹಾಲಿ ಶಾಸಕ ಭರತ್ ಶೆಟ್ಟಿಯೇ ಸ್ಪರ್ಧಿಸಲಿದ್ದಾರೆ.

Mithun Rai

ಮಿಥುನ್ ರೈ

ಮೂಡಬಿದಿರೆ ಕ್ಷೇತ್ರದಿಂದ ಬಿಜೆಪಿಯಿಂದ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಬಹುತೇಕ‌ ಖಚಿತ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ವಿಧಾನಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದ್ದರೆ ಈ ಕ್ಷೇತ್ರವನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ. ಹೀಗಾದರೆ ಉಮಾನಾಥ್ ಕೋಟ್ಯಾನ್ ಮುಂದೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಪಡೆಯಲಿದ್ದಾರೆ. ಕಾಂಗ್ರೆಸ್ ನಿಂದ ಯುವ ನಾಯಕ ಮಿಥುನ್ ರೈ ಹೆಸರು ಪ್ರಚಲಿತದಲ್ಲಿದೆ. ಬಿಲ್ಲವ ನಾಯಕ ಚಲನ ಚಿತ್ರನಟ , ಬಿಲ್ಲವ ಮಹಾಮಂಡಲದ ನಾಯಕ ರಾಜಶೇಖರ್ ಕೋಟ್ಯಾನ್ ಗೆ ಅವಕಾಶವಾದರೂ ಅತಿಶಯೋಕ್ತಿಯಿಲ್ಲ.
ಎಲ್ಲಾ ರಾಜಕೀಯ ಲೆಕ್ಕಾಚಾರಕ್ಕೆ ಜನವರಿ ಕೊನೆಯ ವಾರದಲ್ಲಿ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಯಿದೆ. ಅಧಿಕೃತ ಪ್ರಕಟಣೆಯಾಗುವವರೆಗೆ ಅಂತೆ- ಕಂತೆಗಳ ಮಾತುಗಳೇ ಚಾಲ್ತಿಯಲ್ತಿರುತ್ತದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!