ಸಿಸಿಟಿವಿ ವಿಡಿಯೋ ಲೀಕ್, ಬೆದರಿಕೆಯ ಆಡಿಯೊಗಳ ವಿರುದ್ಧ ಡಾ| ಕಕ್ಕಿಲಾಯ ದೂರು.
ಮಂಗಳೂರು : (ಮೇ.23) ತನ್ನ ಮತ್ತು ತನ್ನ ಕುಟುಂಬದವರನ್ನು ಅವಹೇಳನ ಮಾಡುವ ಮತ್ತು ಜೀವ ಬೆದರಿಕೆಯನ್ನು ಒಡ್ಡುವ ಆಡಿಯೋ ತುಣುಕುಗಳನ್ನು, ಸೂಪರ್ ಮಾರ್ಕೆಟ್ ನ ಸಿಸಿಟಿವಿ ದೃಶ್ಯದ ತುಣುಕುಗಳನ್ನು ಕಾನೂನು ಬಾಹಿರವಾಗಿ ಪ್ರಸಾರ ಮಾಡಲಾಗುತ್ತಿದೆ ಎಂದು ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕದ್ರಿ (ಮಂಗಳೂರು ಪೂರ್ವ ) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ನೀಡಿರುವ ಹೇಳಿಕೆ : “ಸುಮಾರು 30 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೋವಿಡ್ 19 ವೈರಸ್ ಹರಡಿದ ನಂತರ, ನಾನು ನೂರಾರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ ಮತ್ತು ಈ ಸಾಂಕ್ರಾಮಿಕ ರೋಗದ ಬಗ್ಗೆ ಸಂಶೋಧನಾ ಅಧ್ಯಯನಗಳನ್ನು ಮಾಡಿದ್ದೇನೆ. ಸರ್ಕಾರಕ್ಕೆ ಈ ಬಗ್ಗೆ ನನ್ನ ಸಲಹೆ ಸಹಕಾರಗಳನ್ನು ನೀಡಿದ್ದೇನೆ. ನನ್ನ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಸೇವೆ ಯಿಂದ, ದಕ್ಷಿಣ ಕನ್ನಡ ಮತ್ತು ಅದರಾಚೆ ಜನರ ಪ್ರೀತಿ ಗಳಿಸಿದ್ದೇನೆ.
ಮೇ19, 2021ರ ಸರ್ಕಾರದ ಮಾರ್ಗಸೂಚಿಗಳ ಉಲ್ಲಂಘನೆಯ ಬಗ್ಗೆ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಅನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 4,5 ಮತ್ತು 9 ರ ಅಡಿಯಲ್ಲಿ ದಾಖಲಿಸಲಾಗಿದೆ. ಸದ್ರಿ ಪ್ರಾಧಿಕಾರವು ನೀಡಿದ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ, ನಾನು ಈಗಾಗಲೇ ನನ್ನ ವಿವರಣೆಯ ಹೇಳಿಕೆಯನ್ನು ಸಲ್ಲಿಸಿದ್ದೇನೆ.
ನಾನು ಕಾನೂನು ಪಾಲಿಸುವ ಪ್ರಜೆಯಾಗಿದ್ದು, ಯಾವುದೇ ಕಾನೂನನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘಿಸಿಲ್ಲ, ನಾನು ಒಂದು ದಶಕಕ್ಕೂ ಹೆಚ್ಚು ಕಾಲ ಕದ್ರಿಯ ಜಿಮ್ಮೀಸ್ ಸೂಪರ್ ಮಾರ್ಕೆಟ್‌ನ ನಿಯಮಿತ ಗ್ರಾಹಕನಾಗಿದ್ದೇನೆ ಮತ್ತು ಸೂಪರ್ ಮಾರ್ಕೆಟ್‌ನ ಸಿಬ್ಬಂದಿ ಮಾಲಕರು ನನಗೆ ಪರಿಚಿತರಾಗಿದ್ದಾರೆ.

Advertisement
ಜಿಮ್ಮೀಸ್ ಸೂಪರ್ ಮಾರ್ಕೆಟ್‌ನ ಮಾಲಕರು ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಕಾನೂನು ಬಾಹಿರವಾಗಿ ಸಾಮಾಜಿಕ ಮಾಧ್ಯಮಕ್ಕೆ ಪ್ರಸಾರ ಮಾಡಿದ್ದು, ಇದರ ಪರಿಣಾಮವಾಗಿ ದೇಶಾದ್ಯಂತ ಮತ್ತು ವಿದೇಶಗಳಲ್ಲೂ ನನ್ನ ವಿರುದ್ಧ ಹಲವಾರು ಮಾನಹಾನಿಕರ ಹೇಳಿಕೆಗಳು ಹಾಗು ಲೇಖನಗಳು ಪ್ರಕಟಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಈ ಆಯ್ದ ಮತ್ತು ಅಕ್ರಮ ಸೋರಿಕೆ, ಆಡಿಯೊ ರೆಕಾರ್ಡಿಂಗ್‌ಗಳೊಂದಿಗೆ, ನನ್ನನ್ನು ಅಪಚಾರ ಮಾಡಲು ಮತ್ತು ನನಗೆ ಅಪಾರ ಹಾನಿ ಮಾಡುವ ಉದ್ದೇಶಪೂರ್ವಕ ಪ್ರಯತ್ನವೆಂದು ತೋರುತ್ತದೆ. ಕಳೆದ 3 ದಿನಗಳಿಂದ, 2 ಆಡಿಯೊ ತುಣುಕುಗಳು ಸಹ ವೈರಲ್ ಆಗುತ್ತಿವೆ, ಇದು ಜಿಮ್ಮೀಸ್ ಸೂಪರ್ ಮಾರ್ಕೆಟ್‌ನ ಮಾಲಕರಿಗೆ ಪೈ ಎಂಬಾತ ಮಾಡಿದ ದೂರವಾಣಿ ಕರೆಗಳನ್ನು ರೆಕಾರ್ಡ್ ಮಾಡಿದಂತೆ ತೋರುತ್ತದೆ ಮತ್ತು ನನ್ನ ನೆರೆಯವರು ಎಂದು ಹೇಳಿಕೊಳ್ಳುವ ಇನ್ನೊಂದು ಧ್ವನಿ ಹೊಂದಿರುವ ಆಡಿಯೊದಲ್ಲಿ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲು ಮತ್ತು ನನ್ನನ್ನು ಜೈಲಿಗೆ ಅಟ್ಟುವಂತೆ ಪ್ರಚೋದಿಸುವುದು ಕೇಳಿ ಬಂದಿದೆ.

Advertisement
ಅವರು ನನ್ನನ್ನು, ನನ್ನ ಕುಟುಂಬವನ್ನು ಮತ್ತು ಹೋರಾಟಗಾರ, ರಾಜ್ಯಸಭೆಯ ಸದಸ್ಯ, ಎರಡು ಬಾರಿ ಕರ್ನಾಟಕದ ಶಾಸಕರಾದ್ದ ನನ್ನ ದಿ. ತಂದೆಯನ್ನೂ ನಿಂದಿಸಿದ್ದಾರೆ. ಅವರು ಆಡಿಯೋದಲ್ಲಿ ”ರಾಸ್ಕಲ್, ಕಮ್ಯುನಿಸ್ಟ್ ಗೈ ಮತ್ತು ಇತರ ಅವಹೇಳನಕಾರಿ ನಿಂದನಾ ಪದಗಳನ್ನು ಬಳಸಲಾಗಿದೆ. ಅದೇ ಆಡಿಯೊ ಕ್ಲಿಪ್‌ನಲ್ಲಿ, ಪೈ ಎಂಬ ವ್ಯಕ್ತಿ ನನ್ನ ಮೇಲೆ ದೈಹಿಕವಾಗಿ ಆಕ್ರಮಣ ಮಾಡಲು ಅಂಗಡಿಯ ಮಾಲಕರನ್ನು ಕಾನೂನು ಬಾಹಿರವಾಗಿ ಪ್ರಚೋದಿಸುತ್ತಿದ್ದಾನೆ. ಅವರು ನನ್ನ ಮತ್ತು ನನ್ನ ಕುಟುಂಬದ ಮೇಲೆ ನಿರಂತರ ನಿಗಾ ಇಟ್ಟಿದ್ದಾರೆ ಹಾಗು ಹಿಂಬಾಲಿಸುತ್ತಿದ್ದಾರೆ.
ಹೀಗೆ ನನ್ನ ಪ್ರತಿಷ್ಠೆಗೆ ಬೆದರಿಕೆ ಹಾಗು ನನ್ನ ಜೀವಕ್ಕೆ ಹಾನಿಯುಂಟು ಮಾಡುವ ಪಿತೂರಿ ನಡೆದಿದೆ ಎಂದು ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ ದೂರಿನಲ್ಲಿ ತಿಳಿಸಿದ್ದಾರೆ.