ನೀವು ನಮ್ಮಿಂದ ಮರೆಯಾದರೂ ನಾವು ನಿಮ್ಮನ್ನು ಮರೆಯಲ್ಲ ಸರ್ : ಸಾದಿಕ್ ಬರೆಪ್ಪಾಡಿ.

ಮಂಗಳೂರು : ( ಏ.27) ಸಾಮಾಜಿಕ ಜಾಲತಾಣದ ಬಗ್ಗೆಗಿನ ಕಾಳಜಿ, ಬರಹಗಾರಿಕೆ, ಸಾಹಿತ್ಯಾಭಿಮಾನ, ಜಾತ್ಯಾತೀತ ಚಿಂತನೆ ಇಷ್ಟ ಪಟ್ಟ ಮಹೇಂದ್ರ ಕುಮಾರ್ ರವರು ಮೊದಲ ಬಾರಿಗೆ ನನಗೆ ಕಾಲ್ ಮಾಡಿ ನಾನು ಮಹೇಂದ್ರ ಕುಮಾರ್ ಎಂದು ಮಾತು ಆರಂಭಿಸಿದಾಗ ನಾನು ಆಶ್ಚರ್ಯಗೊಂಡಿದ್ದೆ. ಅವರ ಸಾಮಾಜಿಕ ಬದ್ಧತೆ, ದೇಶದ ಬಗ್ಗೆಗಿನ ಕಾಳಜಿ, ಸಮಾಜಮುಖಿ ಚಿಂತನೆ, ಭವ್ಯ ಭಾರತದ ಬಗೆಗಿನ ಕಲ್ಪನೆಯ ಬಗ್ಗೆ ಮಾತನಾಡಿದಾಗ ಪರಸ್ಪರ ಪರಿಚಯವಾಗಿ ನಮ್ಮ ಧ್ವನಿ ತಂಡದ ಸ್ಥಾಪಕ ಸದಸ್ಯನಾದೆ. ಅಂದಿನಿಂದ ಇಂದಿನವರೆಗೂ ಅವರ ಭವ್ಯ ಭಾರತದ ಬಗೆಗಿನ ಹೊಸ ಚಿಂತನೆಗಳು, ನವ ಸಮಾಜ ಕಟ್ಟುವ ಕಾಳಜಿ, ಪ್ರೀತಿಯ ಮಾರ್ಗದರ್ಶನ, ಎಲ್ಲವೂ ಮೊದಲ ಕಾರ್ಯಕ್ರಮದಲ್ಲಿ ಸಾಕ್ಷಿಯಾಗುವ ಮೂಲಕ ನಾನು ಅವರನ್ನು ಮೆಚ್ಚಿ ಆಕರ್ಷಿತನಾಗಿದ್ದೆ.

ಪ್ರತಿಯೊಂದು ಕ್ಷಣವೂ ಅವರಿಂದ ಹೊರಬರುತ್ತಿದ್ದ ಮಾತು ನಾವು ಪ್ರೀತಿಯ ಸಮಾಜ ಕಟ್ಟಬೇಕು ಎಂಬುದಾಗಿತ್ತು. ಅಂತಹ ಆಸಕ್ತಿ ಇರುವವರಿಗೆ ಮಾತ್ರ ನಮ್ಮ ಸಂಘಟನೆಯಲ್ಲಿ ಅವಕಾಶ ಎಂಬುದಾಗಿ ಹೇಳುತ್ತಿದ್ದರು. ಯಾಕೆಂದರೆ ಅವರ ಜ್ಞಾನ, ವಿಚಾರಧಾರೆಗಳು, ಒಂದು ರೀತಿಯಲ್ಲಿ ಯಾರಿಗೂ ಅಷ್ಟು ಸುಲಭವಾಗಿ ಅರ್ಥವಾಗುವಂತೆ ಇರುತ್ತಿರಲಿಲ್ಲ.

Sadiq bareppady

ನೂರು ಜನ ಕೋಮುವಾದಿಗಳಿಗೆ ಉತ್ತರಿಸಲು ಒಬ್ಬ ಜಾತ್ಯತೀತ ಮನೋಭಾವ ಇರುವವ ಸಾಕು ಅನ್ನುತ್ತಿದ್ದರು. ಸಮಾಜದಲ್ಲಿ ಜನರಿಗೆ ಯಡವಟ್ಟಾದಾಗ, ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದಾಗ, ಜನರಿಗೆ ಬೇಕಾಗುವ ಒಳ್ಳೆಯ ಮಾರ್ಗದರ್ಶಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಉತ್ತಮ ವಾಗ್ಮಿಯಾಗಿ, ಸಮಾಜ ಸೇವಕರಾಗಿ, ಹೋರಾಟಗಾರರಾಗಿ ಭವಿಷ್ಯದಲ್ಲಿ ಜನರಿಗೆ ಧೈರ್ಯ ತುಂಬುವ ನಾಯಕರಾಗುತ್ತಿದ್ದರು.
ಯಾಕೆಂದರೆ ಅವರ ಬಳಿಯಿರುವ ಜ್ಞಾನ, ಶಕ್ತಿ, ಭವಿಷ್ಯದ ಮಕ್ಕಳಿಗೆ ಸ್ಫೂರ್ತಿಯಾಗುತ್ತಿತ್ತು. ಅವರು ಪ್ರತಿ ಬಾರಿಯೂ ನನಗೆ ಹೇಳುತ್ತಿದ್ದ ಮಾತು ಸಾದಿಕ್ ನಿಮ್ಮಂತ ಯುವಕರಲ್ಲಿ ಪ್ರತಿಭೆ ಇದೆ, ಬರವಣಿಗೆಯಲ್ಲಿ ಸಮಾಜ ಬದಲಾಯಿಸುವ ಶಕ್ತಿಯಿದೆ, ನಾಯಕರಾಗುವ ಲಕ್ಷಣವಿದೆ ನಾನು ಮಾರ್ಗದರ್ಶನ ನೀಡಲು ನಿಮ್ಮ ಜೊತೆ ಸದಾಸಿದ್ಧ ಎನ್ನುತ್ತಿದ್ದರು.

ಅವರು ಯಾವತ್ತೂ ಸ್ವಾರ್ಥಿ ಆಗಿರಲಿಲ್ಲ, ಅನೇಕ ಬಾರಿ ನಾನು ರಾಜಕೀಯದ ಬಗ್ಗೆ ಪಕ್ಷ ಕಟ್ಟುವ ಬಗ್ಗೆ ಅವರ ಬಳಿ ಮಾತನಾಡುತ್ತಿದ್ದಾಗ ಅಂತಹ ಆಸೆ, ಆಕಾಂಕ್ಷೆ ಇರುತ್ತಿದ್ದರೆ ನಾನು, ಯಾವತ್ತೋ ಶಾಸಕ ಅಥವಾ ಎಂ.ಪಿ ನೋ ಆಗಿರುತ್ತಿದ್ದೆ ಎನ್ನುತ್ತಿದ್ದರು. ಯಾಕೆಂದರೆ ಅವರ ಚಿಂತನೆಯೇ ವಿಭಿನ್ನವಾಗಿತ್ತು. ಕೊನೆಯ ಬಾರಿ ಮಂಗಳೂರಿನ ಕಂಕನಾಡಿಯಲ್ಲಿ ನಡೆದ ಕಾರ್ಯಕ್ರಮದ ಚರ್ಚೆ, ತರಬೇತಿ, ಎಲ್ಲವೂ ಸಮಾಜದಲ್ಲಿ ಹೊಸ ಬದಲಾವಣೆ ಸೃಷ್ಟಿಸುತ್ತಿತ್ತು. ಆ ಕಾರ್ಯಕ್ರಮ ಮುಗಿದ ನಂತರ ನಾವು ಅವರೊಂದಿಗೆ ಮಾತನಾಡಿ ಹೊಸ ಭರವಸೆಯೊಂದಿಗೆ, ಮತ್ತೆ ಭೇಟಿಯಾಗೋಣ ಸರ್ ಎಂದಾಗ ಯಸ್ ಖಂಡಿತ ಮುಂದಿನ ರೂಪುರೇಷೆ ತಯಾರಿಸಿ ಸಮಾಜದಲ್ಲಿ ಬದಲಾವಣೆ ತರುವ ಕಾಲ ಸನ್ನಿಹಿತವಾಗಿದೆ ಎಂದಿದ್ದರು. ಆದರೆ ಅದು ನಮ್ಮ ಕೊನೆಯ ಭೇಟಿ ಅಂದುಕೊಂಡಿರಲಿಲ್ಲ. ಅದರ ನಂತರ ಪ್ರತಿ ಬಾರಿಯೂ ಅವರು ಕಾಲ್ ಮಾಡಿದಾಗ ಆರೋಗ್ಯದ ಬಗ್ಗೆ, ವಿಚಾರಿಸುತ್ತಾ ಕಾರ್ಯಕ್ರಮದ ತಯಾರಿ ಹೇಗಿದೆ ಮುಂದೆ ಯಾವ ರೀತಿ ನಾವು ಯೋಜನೆ ಮಾಡಬಹುದು ಎಂದು ಕೇಳುತ್ತಿದ್ದರು. ಖಂಡಿತ ಅವರ ಅಗಲುವಿಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಒಂದು ವಾರದ ಹಿಂದೆ ಕೂಡ ಕಾಲ್ ಮಾಡಿದ್ದ ಮಹೇಂದ್ರ ಕುಮಾರ್ ರವರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನಿಮ್ಮ ಪುತ್ತೂರಿನಲ್ಲಿ ಕೂಡ ಜಾತ್ಯಾತೀತ ಮನೋಭಾವವುಳ್ಳ ಯುವ ಶಕ್ತಿಯನ್ನು ಕಟ್ಟಬೇಕಿದೆ, ಲಾಕ್ ಡೌನ್ ಮುಗಿಯಲಿ ಮತ್ತೆ ಭೇಟಿಯಾಗೋಣ ಹೊಸ ವಿಚಾರಗಳ ಬಗ್ಗೆ ಮಾತನಾಡೋಣ ಅಂದಿದ್ದರು. ಆದರೆ, ಅದು ಅವರ ಜೊತೆಗಿನ ನನ್ನ ಕೊನೆಯ ಸಂಭಾಷಣೆ ಅಂದುಕೊಂಡಿರಲಿಲ್ಲ. ನಿಜವಾಗಿಯೂ ನಾನು ಯಾವತ್ತು ಇಂತಹ ಒಬ್ಬ ಸಮಾಜದ ಬಗ್ಗೆನೇ ಚಿಂತಿಸುತ್ತಿರುವ, ಸಮಾಜದ ಬಗ್ಗೆನೇ ಕಾಳಜಿ ಇರುವ ಸಮಾಜ ಒಡೆಯುವ ಮನಸ್ಸುಗಳ ಮಧ್ಯೆ ಸಮಾಜ ಕಟ್ಟಲು ಬೇಕಾಗಿ ಕಾಲಿಗೆ ಚಕ್ರ ಕಟ್ಟಿದಂತೆ ಓಡಾಡುತ್ತಿರುವ ಸಮಾಜ ಸ್ನೇಹಿ, ಚಿಂತಕರು, ನಿಸ್ವಾರ್ಥ ಮನೋಭಾವವುಳ್ಳ ಇಂತಹ ನಾಯಕರನ್ನು ಎಲ್ಲಿಯೂ ನೋಡಿಲ್ಲ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಇದು ನಿಮ್ಮ ಕಾರ್ಯಕ್ರಮ, ಇದು ನಿಮಗಾಗಿ ಎಂದು ಹೇಳುತ್ತಾ, ಕಾರ್ಯಕ್ರಮದ ನೇತೃತ್ವ ವಹಿಸಿ, ಕಾರ್ಯಕ್ರಮದ ಯಶಸ್ವಿಗಾಗಿ ದುಡಿಯುತ್ತಿರುವ ಯಶಸ್ವಿ ಸಂಘಟಕರಾದ ಮಹೇಂದ್ರ ಕುಮಾರ್ ರವರ ನೆನಪುಗಳು ಕಣ್ಣ ಮುಂದೆ ಸಾಗುತ್ತಿದೆ, ನಂಬಲಾಗುತ್ತಿಲ್ಲ. ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Mahedrakumar sadiq

ಮಹೇಂದ್ರಕುಮಾರ್ ಕೊಪ್ಪ ರವರ ಜೊತೆ ಸಾದಿಕ್ ಬರೆಪ್ಪಾಡಿ

ಅವತ್ತು ಬೆಳಗಿನ ಜಾವ ಸಹರಿ ಉಂಡು ನಮಾಜ್ ಮಾಡಿ ಮಲಗಿದ್ದೆ, ಸ್ನೇಹಿತ ಲೋಹಿತ್ ನಾಯ್ಕ್ ರವರು ಕಾಲ್ ಮಾಡಿ ಸಣ್ಣ ಧ್ವನಿಯಲ್ಲಿ ನಮಗೆ ಸಾಡ್ ನ್ಯೂಸ್ ಸಾದಿಕ್, ನಮ್ಮ ಮಹೇಂದ್ರ ಅಣ್ಣ ಇನ್ನಿಲ್ಲ, ಮಂಗಳೂರಿನ ಸ್ನೇಹಿತರಿಗೆ ತಿಳಿಸಿ ಎಂದು ಹೇಳಿ ಅಳುತ್ತಾ ಫೋನ್ ಇಟ್ಟರು. ನಾನು ನಂಬಲೇ ಇಲ್ಲ. ಕನಸು ಅಂದುಕೊಂಡೆ, ಯಾರಿಗೂ ಕಾಲ್ ಮಾಡಲೂ ಧೈರ್ಯವಿರಲಿಲ್ಲ. ಸ್ನೇಹಿತರಾದ ಜೈನುಲ್ ಅಕ್ಬರ್, ರಿಲ್ವಾನ್, ವಾಸುದೇವ ಹೆಗಡೆ, ಹಾಗೂ ಉಮರ್ ಕುಂಞಿಯವರಿಗೆ ಕಾಲ್ ಮಾಡಿ ಕೇಳೋಣವೇ ಅಥವಾ ಅವರಿಗೆ ವಿಷಯ ತಿಳಿಸೋಣವೇ ಎಂದರೆ ಧ್ವನಿಯೇ ಬರುತ್ತಿರಲಿಲ್ಲ. ಅಷ್ಟು ಶಾಕಿಂಗ್ ನ್ಯೂಸ್ ಅದಾಗಿತ್ತು. ವಾಟ್ಸಾಪ್ ನಲ್ಲಿ ಪಾರ್ಥೀವ ಶರೀರದ ಫೊಟೋ ಬಂದಾಗ ಸೃಷ್ಟಿಕರ್ತ ಒಳ್ಳೆಯವರನನ್ನು ಇಷ್ಟು ಬೇಗ ತಮ್ಮ ಬಳಿ ಕರೆಯುತ್ತಾನೆಯೇ ಎಂಬ ಪ್ರಶ್ನೆ ನನ್ನಲ್ಲಿ ಮೂಡತೊಡಗಿತು. ಇನ್ನು ಮಹೇಂದ್ರ ಕುಮಾರ್ ಹೆಸರಿನ ಫೋನ್ ನಂಬರ್ ನಿಂದ ನನಗೆ ಕರೆ ಬರಲು ಸಾಧ್ಯವಿಲ್ಲ.

ಅವರ ಭೇಟಿ ಇನ್ನು ಇಲ್ಲ, ನಮ್ಮ ಧ್ವನಿಯ ಜೊತೆ ಮಹೇಂದ್ರ ಕುಮಾರ್ ಎಂಬ ನಾವಿಕ ಇರುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆಗದಷ್ಟು ಹೃದಯ ಭಾರವಾಗಿ ಬಿಟ್ಟಿದೆ. ಸರ್ ನಿಮ್ಮನ್ನು ನಾವು ಕಳೆದುಕೊಂಡಿರಬಹುದು, ಆದರೆ ನಿಮ್ಮ ಆಶಯ,ಆದರ್ಶ ಗುಣ, ನೀವು ಬಿತ್ತಿ ಹೋದ ಶಾಂತಿ, ಸೌಹಾರ್ದತೆಯ ಮಂತ್ರ, ಮಾರ್ಗದರ್ಶನ, ಸಹಬಾಳ್ವೆಯ ಜೀವನ, ಭವಿಷ್ಯದ ಕನಸು ನಾವು ನಮ್ಮ ಎದೆಯ ಗೂಡೊಳಗೆ ಜೋಪಾನವಾಗಿ ಇಟ್ಟುಕೊಂಡು ನಿಮ್ಮ ಕನಸನ್ನು ನನಸಾಗಿಸುವ ಹಾದಿಯಲ್ಲಿ ಮುಂದೆ ಸಾಗಲಿದ್ದೇವೆ.

ನೀವು ನಮ್ಮಿಂದ ಮರೆಯಾದರೂ ನಾವು ನಿಮ್ಮನ್ನು ಮರೆಯಲ್ಲ ಸರ್.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!