ರಾಷ್ಟ್ರವನ್ನು ಸುಳ್ಳಿನ ತಳಹದಿಯಲ್ಲಿ ಕಟ್ಟಲು ಸಾಧ್ಯವಿಲ್ಲ : ಉದ್ಯಾವರ ನಾಗೇಶ್ ಕುಮಾರ್

ಬೆಂಗಳೂರು : (ಡಿ.03) ಮಹಾರಾಷ್ಟ್ರದಲ್ಲಿ ಕ್ಷುಲಕ ಅಧಿಕಾರ ದಾಹದಿಂದ ಬಿಜೆಪಿ ಬಹುಮತವಿಲ್ಲದೇ ರಾತ್ರೋ ರಾತ್ರಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಹೋಗಿ ಬಹುಮತವನ್ನು 24 ಗಂಟೆಯೊಳಗೆ ಸಾಬೀತು ಪಡಿಸಬೇಕು ಎಂಬ ಸುಪ್ರೀಂ ಕೋರ್ಟಿನ ಆದೇಶದಿಂದ ಬೋರಲು ಬಿದ್ದು, ಫಡ್ನವೀಸ್ ರಾಜಿನಾಮೆಯನ್ನು ಕೊಟ್ಟು ಜಾಗ ಖಾಲಿ ಮಾಡಿದ ಪ್ರಕರಣ ದೇಶದಾದ್ಯಂತ ಗೇಲಿಗೊಳಗಾಯಿತು.

ಬಿಜೆಪಿಯ ಅಧಿಕಾರ ದಾಹ, ಆಸೆ ಬುರುಕುತನ, ಅಧಿಕಾರಕ್ಕಾಗಿ ಯಾವುದೇ ಹಂತಕ್ಕೆ ತನ್ನ ನೈತಿಕತೆಯನ್ನು ಇಳಿಸಬಲ್ಲ ಮನೆ ಮುರುಕತನದ ಬಗ್ಗೆ ದೇಶದ ಜನತೆಯಲ್ಲಿ ಚರ್ಚೆಗೆ ಈಡಾಯಿತು. ಇದರಿಂದ ಬಿಜೆಪಿಯು ಜನರ ಮಧ್ಯೆ ಬೆತ್ತಲಾಗುತ್ತಿದೆ ಎಂದು ಬಿಜೆಪಿಯ ಐಟಿ ಸೆಲ್‍ಗೆ ಮನವರಿಕೆಯಾಯಿತು. ಆಗ ನೋಡಿ ಈ ಡ್ಯಾಮೇಜ್ ಕಂಟ್ರೋಲ್ ಮಾಡಲು ಐಟಿ ಸೆಲ್ ರಂಗ ಪ್ರವೇಶ ಮಾಡಿತು . ಜನತೆಯನ್ನು ಮರುಳು ಮಾಡಲು ಆಗ ಕಟ್ಟಿದ ಕಾಗಕ್ಕ ಗೂಬಕ್ಕ ಕಥೆಯೇ ಈ 40 ಸಾವಿರ ಕೋಟಿ ರೂಪಾಯಿ ವರ್ಗಾವಣೆ ಪ್ರಕರಣ.

Ananth Kumar hegde

ಕೇಂದ್ರ ಸರಕಾರ ಮಹಾರಾಷ್ಟ್ರ ಸರಕಾರಕ್ಕೆ ಬುಲೆಟ್ ಟ್ರೇನ್ ಯೋಜನೆ ಅಳವಡಿಕೆಗಾಗಿ 40,000 ರೂಪಾಯಿ ಕಳಿಸಿತ್ತು ಅದು ಹಣ ಹಾಗೇ ಇತ್ತು, ಆ ಹಣದ ಬಗ್ಗೆ ಕಾಂಗ್ರೆಸ್ ಸೋನಿಯಾ ಗಾಂಧಿಯವರಿಗೆ ಕಣ್ಣಿತ್ತು, ಒಟ್ಟಿನಲ್ಲಿ ಫಡ್ನವೀಸ್‍ಗೆ ಈ ಹಣವನ್ನು ಉಳಿಸಬೇಕಿತ್ತು. ಅಜಿತ್ ಪವಾರ್‍ನೊಂದಿಗೆ ಡೀಲ್ ಮಾಡಿಕೊಂಡು 159 ಜನ ಬೆಂಬಲಿಗ ಶಾಸಕ ಪಟ್ಟಿ ಮಾಡಿಕೊಂಡು ತುರಾತುರಿಯಲ್ಲಿ ಸರಕಾರ ರಚಿಸಿ ಮುಖ್ಯಮಂತ್ರಿಯಾಗಿ 3 ದಿನಗಳಲ್ಲಿ ಆ ಹಣವನ್ನು ಯಶಸ್ವಿಯಾಗಿ ಕೇಂದ್ರ ಸರಕಾರಕ್ಕೆ ಹಿಂತಿರುಗಿಸಿದರು. ಈ ಹಣವನ್ನು ರೈತರ ಹೆಸರಲ್ಲಿ ಮೂರು ಪಕ್ಷಗಳು ತಿಂದು ನೀರು ಕುಡಿಯುತ್ತಿದ್ದವು. ಈ ಮೊತ್ತವನ್ನು ಉಳಿಸಿ ಸಂತಸದಿಂದ ರಾಜೀನಾಮೆ ಬಿಸಾಕಿ ಹೊರ ನಡೆದರು. ಫಡ್ನವೀಸರ ಈ ಕೆಲಸಕ್ಕೆ ಶಾ, ಮೋದಿಯಿಂದಲೂ ಶಬಾಷ್‍ಗಿರಿ ದೊರೆಯಿತು ಎಂದು ಬಿಜೆಪಿ ಐಟಿ ಸೆಲ್ ಸಾಮಾಜಿಕ ಜಾಲತಾಣಗಳಲ್ಲಿ ಬೋಂಗು ಬಿಡ ಹತ್ತಿತು.

Advertising

ಇದನ್ನು ಗಮನಿಸಿದ ತಲೆಯಲ್ಲಿ ಮೆದುಳು ಇರುವ ಜಾಗದಲ್ಲಿ ಸೆಗಣಿ ತುಂಬಿಕೊಂಡಿರುವ ಭಕ್ತರಿಗೆ ಖುಷಿಯೇ ಖುಷಿ. ಅದನ್ನು ಶೇರ್ ಮಾಡಿದ್ದೇ ಮಾಡಿದ್ದು. ಸತ್ಯಾ ಸತ್ಯತೆಯನ್ನು ತಿಳಿಯದೆ ವಾಟ್ಸ್ಯಾಪ್ ಯುನಿವರ್ಸಿಟಿಯೇ ಜ್ಞಾನದ ಅಂತಿಮ ಮೂಲ ಅಂದುಕೊಂಡ ಕೆಲವು ಸಂಭಾವಿತ ಜನರು ಅದನ್ನು ಸಮರ್ಥಿಸತೊಡಗಿದರಿಂದ ಫಡ್ನವಿಸರಿಗೆ ಹುತಾತ್ಮ ಪಟ್ಟ ದೊರೆಯಿತು.

ಈ ಬಿಜೆಪಿ ಐಟಿ ಸೆಲ್‍ನ ಇಂತಹಾ ಸುಳ್ಳುಗಳನ್ನು ದೇಶ ಜನತೆ ನಂಬಿಯೇ ಬಿಜೆಪಿ ಈಗ ಅಧಿಕಾರಕ್ಕೆ ಬಂದಿರುವುದು. ದೇಶದ ಜನತೆಯನ್ನು ಯಶಸ್ವಿಯಾಗಿ ಮೂರ್ಖರನ್ನಾಗಿಸುವಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಂ ಹೆಗ್ಡೆಯಂತವರು ಸಫಲರಾಗಿರುವುದು. ಆದರೆ ಈ ಬಾರಿ ಅದದ್ದು ಬೇರೆ , ಜನರನ್ನು ಮೂರ್ಖರನ್ನಾಗಿಸಬೇಕು ಮತ್ತು ಪಕ್ಷದ ಡ್ಯಾಮೇಜ್ ಕಂಟ್ರೋಲ್ ಮಾಡಬೇಕು ಎಂದು ಸೃಷ್ಟಿಸಿದ ಈ ಕಾಗಕ್ಕ ಗೂಬಕ್ಕ ಕತೆಗೆ ಬಿಜೆಪಿಯ ಪ್ರಬಲ ನಾಯಕ ಕೇಂದ್ರ ಮಂತ್ರಿ ಉರಿ ನಾಲಿಗೆಯ ಅನಂತ ಕುಮಾರ್ ಹೆಗ್ಡೆಯವರು ಬಲಿಯಾದರು.

Padnavis

ಬಿಜೆಪಿಯ ಐಟಿ ಸೆಲ್‍ನ ಈ ಕತೆಯನ್ನು ಕೇಳಿ ಸತ್ಯವೆಂದು ನಂಬಿ ಚುನಾವಣಾ ಪ್ರಚಾರ ಭಾಷಣದಲ್ಲಿ ನಾವು ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಯಾಕೆ ಪ್ರಯತ್ನಿಸಿದ್ದೇವೆ ಎಂಬುದಕ್ಕೆ ಈ ಕತೆಯನ್ನು ರಸವತ್ತಾಗಿ ಫಡ್ನವೀಸರನ್ನು ಪ್ಯಾಂಟಮ್ಗೆ ಹೋಲಿಸಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ತಮಗೆ ಬಹುಮತ ಇಲ್ಲದಿದ್ದರೂ ಕೂಡಾ ತುರಾತುರಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದು 40,000 ಕೋಟಿ ಉಳಿಸುವ ನಾಟಕವಾಗಿತ್ತು ಎಂದರು.

ಇದೀಗ ಈ ಹೇಳಿಕೆ ಬಿಜೆಪಿಯನ್ನು ಮುಜುಗರಕ್ಕೆ ಒಳಗಾಗಿಸಿದೆ. ಪಕ್ಷಕ್ಕೆ ಈ ಹೇಳಿಕೆ ಮುಳುವಾಗ ಬಹುದು ಎಂದು ಎಚ್ಚೆತ್ತುಕೊಂಡ ಫಡ್ನವೀಸ್ ಇಲ್ಲ ಇಂತಹ ಬೆಳವಣಿಗೆ ನಡೆದೇ ಇಲ್ಲ ಇದು ಶುದ್ಧ ಸುಳ್ಳು ಬೇಕಾದರೆ ತನಿಖೆ ನಡೆಯಲಿ ಎಂದು ಹೇಳಿಕೆಯನ್ನು ಇತ್ತಿದ್ದಾರೆ. ವಿರೋಧ ಪಕ್ಷಗಳು ಈ ರೀತಿ ನಿಧಿಯನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ ಅದು ನಿಜವೇ ಆಗಿದ್ದರೆ ಪ್ರಧಾನಿ ರಾಜಿನಾಮೆಯನ್ನು ಕೊಡಬೇಕು ಅನ್ನುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಬಂದ ಹಣವನ್ನು ಈ ರೀತಿ ಏಕಾಏಕಿ ಕೇಂದ್ರಕ್ಕೆ ಹಿಂತಿರುಗಿಸುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಹಿನ್ನಡೆ ಎಂದು ರಾಜ್ಯದ ಜನತೆ ಮಾತನಾಡ ಹತ್ತಿದ್ದಾರೆ.

Advertising

ಮೊದಲಿನಿಂದಲೂ ಕೂಡಾ ಇಂತಹ ಸುಳ್ಳುಗಳಿಂದಲೇ ಜನಪ್ರಿಯವಾದ ಬಿಜೆಪಿಗೆ ತಾನೇ ಸೃಷ್ಟಿಸಿದ ಸುಳ್ಳು ಇವತ್ತು ಕುತ್ತಿಗೆ ಸುತ್ತಿಕೊಂಡಿರುವುದು ಬಹಳ ಸಂತಸದ ಸಂಗತಿ. ಈ ಪ್ರಕರಣದಿಂದ ಬಕ್ರ ಆದ ಅನಂತ ಕುಮಾರ್ ಹೆಗ್ಡೆ ಪರಿಸ್ಥಿತಿ ನೋಡುವಾಗ ಕೆಲಸವಿಲ್ಲದ ಮಂಗವೊಂದು ಮರದ ದಿಮ್ಮಿಗೆ ತನ್ನ ಬಾಲ ಸಿಕ್ಕಿಸಿಕೊಂಡು ಒದ್ದಾಡಿದ ಕತೆ ನೆನಪಾಗುತ್ತದೆ. ಬಿಜೆಪಿಯಂತೂ ತಾನೆ ತೋಡಿದ ಹಳ್ಳಕ್ಕೆ ಬಿದ್ದಿದೆ.

ಜನತೆ ಇನ್ನಾದರೂ ಬಿಜೆಪಿ ಐಟಿ ಸೆಲ್ ಹೇಳುವ ಸಂಗತಿಗಳಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎಂದು ತಿಳಿದು ನಂತರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿ. ಒಂದು ರಾಷ್ಟ್ರವನ್ನು ಸುಳ್ಳಿನ ತಳಹದಿಯಲ್ಲಿ ಎಂದೂ ಕಟ್ಟಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು, ಭಕ್ತರು ಮತ್ತು ಅವರ ಪ್ರಭಾವಕ್ಕೆ ಒಳಗಾಗುವ “ಸಂಭಾವಿತ” ಮತದಾರರು ಎಷ್ಟು ಬೇಗ ತಿಳಿದುಕೊಳ್ಳುತ್ತಾರೋ ಅಷ್ಟು ದೇಶಕ್ಕೆ ಒಳ್ಳೆದು ಎಂದು ಉದ್ಯಾವರ ನಾಗೇಶ್ ಕುಮಾರ್ ಹೇಳಿಕೆಯನ್ನು  ನೀಡಿದ್ದಾರೆ.

CATEGORIES
Share This

COMMENTS

Wordpress (0)
Disqus ( )
error: Content is protected !!