ಜನರಲ್ಲಿ ಭೀತಿ ಹುಟ್ಟಿಸುವ ಶಾಸಕನ ವಿರುದ್ಧ ಕ್ರಮಕೈಗೊಳ್ಳಿ ಮಾಜಿ ಸಚಿವ ಆಂಜನೇಯ ಒತ್ತಾಯ.
ಚಿತ್ರದುರ್ಗ : (ಮೇ.18) ಹೊಳಲ್ಕೆರೆ ಕೊರೋನಾ ಸೋಂಕು ಎಲ್ಲೆಡೆ ವ್ಯಾಪಿಸುತ್ತಿದ್ದು, ಈ ವೇಳೆ ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಜನ ಎಲ್ಲಾದ್ರೂ ಸಾಯಿಲಿ ಬಿಡ್ರಿ, ಇಲ್ಲಿ ಆಸ್ಪತ್ರೆ ಮಾಡಲು ಬಿಡುವುದಿಲ್ಲ ಎಂಬ ಮಾತು ಉದ್ಧಟತನದಿಂದ ಕೂಡಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಸೋಂಕು ಎಲ್ಲೆಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ಸಂದರ್ಭ ಗುಣಮಟ್ಟ ಚಿಕಿತ್ಸೆ ನೀಡಲು ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಸೇವೆ ಕಲ್ಪಿಸಲು ಕ್ರಮಕೈಗೊಳ್ಳಬೇಕಾದ ಚಂದ್ರಪ್ಪ ಅವರ ಉದ್ಧಟತನ ಮಾತು ಜನರಲ್ಲಿ ಭೀತಿ ಹುಟ್ಟಿಸುತ್ತಿದೆ ಎಂದು ದೂರಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ತಪ್ಪು ಮಾಡಿದರೆ ಅಥವಾ ಜನಪ್ರತಿನಿಧಿಗಳ ಮಾತು ಕೇಳದಿದ್ದರೆ ಅವರ ಮೇಲೆ ಅಧಿಕಾರ ಚಲಾಯಿಸಿ ಸೌಲಭ್ಯ ಪಡೆಯುವುದು ಜನಪ್ರತಿನಿಧಿಗಳಾದವರ ಹೊಣೆಗಾರಿಕೆ. ಅದನ್ನು ಬಿಟ್ಟು ಹೊಳಲ್ಕೆರೆಯಲ್ಲಿ ಕೋವಿಡ್ ಆಸ್ಪತ್ರೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಜನ ಎಲ್ಲಿದ್ದಾರೋ ಅಲ್ಲಿಯೇ ಸಾಯಲಿ ಬಿಡ್ರಿ ಎಂಬ ಉದ್ಧಟತನ ವರ್ತನೆ ಜನರನ್ನು ಭೀತಿಗೊಳಿಸುವಂತದ್ದಾಗಿದೆ.
ಬೆಳಗ್ಗೆಯಿಂದ ರಾತ್ರಿಯವರೆಗೂ ಕ್ಷೇತ್ರ ಸುತ್ತಾಟ ನಡೆಸಿ ಜನರ ಆರೋಗ್ಯ ವಿಚಾರಣೆ, ಗ್ರಾಮೀಣ ಮಟ್ಟದಲ್ಲಿ ಕೋವಿಡ್ ಕೇಂದ್ರ, ಆರೋಗ್ಯ ಕೇಂದ್ರಗಳ ವ್ಯವಸ್ಥೆ ಪರಿಶೀಲಿಸದ ಚಂದ್ರಪ್ಪ, ಜಿಲ್ಲಾ ಸಚಿವ ಶ್ರೀರಾಮುಲು ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆಯೂ ಆರೋಗ್ಯ ಸೇವೆ ಕ್ಷೇತ್ರಕ್ಕೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಂತಹ ವೇಳೆ ಹೊಳಲ್ಕೆರೆಯಲ್ಲಿ 50 ಹಾಸಿಗೆಯ ಕೋವಿಡ್ ಆಸ್ಪತ್ರೆ ಮಾಡಲು ಮುಂದಾದ ಜಿಲ್ಲಾ ಆರೋಗ್ಯ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿದ್ದು ಸರಿಯಲ್ಲ. ಚಂದ್ರಪ್ಪ ಅವರಿಗೆ ಬಹುತೇಕ ಮತಿಭ್ರಮಣೆ ಆಗಿರಬೇಕು, ಇಲ್ಲದಿದ್ದರೆ ಜಾಸ್ತಿ ತೆಗೆದುಕೊಂಡು ಮಾತನಾಡಿರಬೇಕು.

Advertisement
ಆದ್ದರಿಂದ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಶಾಸಕ ಎಂ.ಚಂದ್ರಪ್ಪ ಅವರನ್ನು ಮಾನಸಿಕ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕು. ಅಲ್ಲಿಯವರೆಗೆ ಎಲ್ಲಿಯೂ ಹೊರಗಡೆ ಮಾತನಾಡದಂತೆ ನಿರ್ಬಂಧ ವಿಧಿಸಬೇಕು. ಇಲ್ಲದಿದ್ದರೆ ಜನರನ್ನು ಭೀತಿಗೆ ಒಳಪಡಿಸಿ ಜನರ ಜೀವದ ಜತೆ ಚೆಲ್ಲಾಟವಾಡುತ್ತಾರೆ. ಆದ್ದರಿಂದ ಜನರ ಆರೋಗ್ಯ ದೃಷ್ಟಿಯಿಂದ ಕೂಡಲೆ ಅವರನ್ನು ಮಾನಸಿಕ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಸ್ಪತ್ರೆಗಳ ಕಟ್ಟಡ ಜನಸೇವೆಗೆ ಬಳಕೆ ಆಗಲಿ :
ನಾನು ಸಚಿವನಾಗಿದ್ದ ವೇಳೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದು ಎಚ್ . ಡಿ ಪುರದಲ್ಲಿ 2.50 ಕೋಟಿ ರೂ., ರಾಮಗಿರಿಯಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿಸಿದ್ದೇ. ಆದರೆ, ಚುನಾವಣೆ ಎದುರಾಗಿದ್ದರಿಂದ ಉದ್ಘಾಟನೆ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಆಂಜನೇಯ ತಿಳಿಸಿದ್ದಾರೆ. ಆದರೆ, ಬಳಿಕ ಕ್ಷೇತ್ರದ ಶಾಸಕರಾದ ಎಂ.ಚಂದ್ರಪ್ಪ, ಮೂರು ವರ್ಷವಾದರೂ ಈ ಕಟ್ಟಡಗಳ ಉದ್ಘಾಟನೆ ಮಾಡದೇ ನಿರ್ಲಕ್ಷೃ ವಹಿಸಿದ್ದಾರೆ. ಪರಿಣಾಮ ಮೂರು ವರ್ಷದಿಂದ ಅ ಕಟ್ಟಡಗಳು ಪಾಳು ಬಿದ್ದು ಅನುಪಯುಕ್ತವಾಗಿವೆ. ಕೋಟ್ಯಂತರ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದರೂ ಜನರಿಗೆ ಆರೋಗ್ಯ ಸೇವೆ ದೊರೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರ ನಿರ್ಲಕ್ಷೃದಿಂದ ಜನರ ಹಣ ಸದ್ಬಳಕೆ ಆಗುತ್ತಿಲ್ಲ. ಜತೆಗೆ ಈ ಪ್ರದೇಶದಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ ಬಾಡಿಗೆ ಅಥವಾ ಕಿಷ್ಕಿಂಧೆ ಕಟ್ಟಡಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಕರೋನಾ ಸೋಂಕು 2ನೇ ಅಲೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾಡಳಿತ ಈ ಎರಡು ಆಸ್ಪತ್ರೆಗಳ ಕಟ್ಟಡಗಳನ್ನು ವೈದ್ಯಕೀಯ ಚಿಕಿತ್ಸೆ ನೀಡಲು ತಕ್ಷಣವೇ ಬಳಸಿಕೊಳ್ಳಬೇಕು. ಈ ಸಂಬಂಧ ಶಾಸಕ ಎಂ.ಚಂದ್ರಪ್ಪ ಏನಾದ್ರೂ ತಕಾರಾರು ತೆಗೆದರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಜನರಿಗೆ ಆರೋಗ್ಯ ಸೇವೆ ಮುಖ್ಯ ಆಗಬೇಕು ಎಂದು ಆಂಜನೇಯ ಒತ್ತಾಯಿಸಿದ್ದಾರೆ.