ಲಾಕ್ ಡೌನ್ ನಿಂದ ತತ್ತರಿಸಿದ ಅಮಾಯಕರ ಬದುಕಿಗೆ ವ್ಯವಸ್ಥೆ ಕಲ್ಪಿಸುವವರಾರು : ಶ್ರೀಪ್ರಸಾದ್ ಎನ್ ಪಾಣಾಜೆ

ಪುತ್ತೂರು : ( ಏ. 19) ಕೊರೊನಾ ಎರಡನೇ ಅಲೆ ಎದ್ದಿದ್ದೇನೋ ನಿಜ. ವೈರಸ್ ಗಿರುವ ಕ್ರಿಯಾಶೀಲತೆ ಹಾಗೂ ಗಂಭೀರತೆ ಅತ್ತ ಸರಕಾರಕ್ಕೂ ಇಲ್ಲ, ಇತ್ತ ಜನತೆಗೂ ಇಲ್ಲ. ‘ನಾಮ್ ಕೇ ವಾಸ್ತೆ’ ಎಂಬಂತೆ ಯಾರದೋ ಮನ ಶಾಂತಿಗೊಂದು ಕಟ್ಟುನಿಟ್ಟಿನ ಆದೇಶಗಳು ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಹೊರಬರುತ್ತಿವೆ. ಆದೇಶ ಪತ್ರಗಳಲ್ಲಿರುವ ಕಟ್ಟುನಿಟ್ಟಿನ ಕ್ರಮಗಳು ಪಾಲನೆಯ ವಿಷಯಕ್ಕೆ ಬಂದಾಗ ಬೆಣ್ಣೆಯಂತೆ ಕರಗಿ ಮಾಯವಾಗುತ್ತದೆ.

Shriprasad

ಅನರ್ಥ ನೈಟ್ ಕರ್ಫ್ಯೂ ಕೊರೊನಾ ನಿಯಂತ್ರಿಸದು ಎಂಬ ಸತ್ಯ ಸರಕಾರಕ್ಕೂ ಗೊತ್ತಿದ್ದರೂ, ಏನಾದರೊಂದು ಇರಲಿ ಎಂದು ಎಸೆದ ಅಸ್ತ್ರ ಕೊರೊನಾ ಕತ್ತನ್ನು ಕೊಯ್ಯುವ ಲಕ್ಷಣವೇನೂ ಕಾಣುತ್ತಿಲ್ಲ, ಆದರೆ ಬದುಕು ಬೀದಿಗೆ ಬಂದಿದ್ದು ಅದೇ ರಾತ್ರಿ ಸಮಯದಲ್ಲಿ ಜೀವನ ಕಟ್ಟಿಕೊಳ್ಳುವ ವರ್ಗದವರದ್ದು. ಸಂಗೀತ ರಸಮಂಜರಿ, ನಾಟಕ, ಯಕ್ಷಗಾನ ಮುಂತಾದ ಕಲಾ ಸೇವೆಯನ್ನು ನೀಡಿ ಆದಾಯಗಳಿಸುವ ಕಲಾವಿದರು ನೈಟ್ ಕರ್ಪ್ಯೂ ಗೆ ಬಲಿಯಾಗುತ್ತಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸೀಮಿತ ಜನಸಂಖ್ಯೆಯಲ್ಲಿ ನಡೆಯಬೇಕೆಂದು ಆದೇಶಗಳಲ್ಲಿರುವ ನಿಯಾಮಾವಳಿ ಆದರೆ, ಎಲ್ಲೆಲ್ಲೂ ನಡೆಯುವ ರಾಜಕೀಯ ರ್ಯಾಲಿಗಳಲ್ಲಿ ಕೊರೊನಾ ಭೀತಿ ಕಾಣುವುದಿಲ್ಲ. ಆದರೆ, ಸರಕಾರದ ಇಂದಿನ ಆದೇಶ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರ ಮಹೋತ್ಸವದಲ್ಲಿ ಅಯೋಮಯವಾಗಿ ಬಂದಿದ್ದ ವರ್ಗಕ್ಕೆ ದೊಡ್ಡ ಆಘಾತವೇ ಕಾದಿತ್ತು. ದೇವಸ್ಥಾನದ ಮುಂಭಾಗದಲ್ಲಿ ಹಾಕಿದ ಸಂತೆಯನ್ನು ಕೂಡಲೆ ತೆರವುಗೊಳಿಸುವಂತೆ ಬಂದ ಸೂಚನೆ ಮಳೆ ಹನಿಗಳ ಜೊತೆಗೆ ಕಣ್ಣೀರನ್ನು ಸೇರಿಸುವಂತೆ ಮಾಡಿತು. ಅಮಾಯಕರು ನಿಯಮ ಪಾಲನೆ ಮಾಡದೆ ಮತ್ತೇನು ಮಾಡಿಯಾರು? ತಂದಿದ್ದ ಸಾಮಾನುಗಳೆಲ್ಲವನ್ನು ಗಂಟು ಕಟ್ಟಿ ದುಃಖದ ಮೂಟೆಯೊಂದಿಗೆ ಹೊರಹೋದರು.

ಕೊರೊನಾ ನಿಯಂತ್ರಣದ ಈ ನಿಯಮವೇನೊ ಚೆನ್ನಾಗಿದೆ ಆದರೆ ಈ ಚೆನ್ನನೆಯ ಕ್ರಮಗಳು ಅಮಾಯಕರ ಬದುಕನ್ನು ಮಣ್ಣಾಗಿಸುತ್ತಿದೆ.
ಪಾಲನೆ ಆಗುವುದಾದರೆ ಎಲ್ಲವೂ ಕ್ರಮಬದ್ದವಾಗಿ ನಡೆಯಲಿ. ಕೊರೊನಾ ನಿಯಂತ್ರಣ ಬರಬೇಕಾದುದು ಅನಿವಾರ್ಯವೆಂಬ ಸತ್ಯ ಗೊತ್ತಿದೆ. ಆದರೆ ಸೀಮಿತ ಜನರ ಬದುಕು ಮಾತ್ರ ಕೊಚ್ಚಿ ಹೋಗವಂತಹ ಕ್ರಮಗಳನ್ನು ಸರಕಾರ ಹೊರಡಿಸುವ ಮುನ್ನ ಅದೇ ಜನತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದರೆ ದುಖದ ಮೋಡವನ್ನು ತಿಳಿಗೊಳಿಸಬಹುದಿತ್ತು ಎಂದು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಎನ್. ಪಾಣಾಜೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!