ಕೆ.ಎಸ್.ಆರ್. ಟಿ.ಸಿ ನೌಕರರ ಬೇಡಿಕೆಗಳನ್ನು ಮಾನವೀಯ ನೆಲೆಯಲ್ಲಿ ಈಡೇರಿಸಿ – ಗೋಪಾಲ ಪೂಜಾರಿ

ಕುಂದಾಪುರ : (ಏ.19) 6 ನೇ ವೇತನ ಆಯೋಗದ ವೇತನ ನೀಡುವುದು ಸೇರಿ ಇತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಮುಷ್ಕರ ನಡೆಸುತ್ತಿರುವ ಕೆಎಸ್ಆರ್ ಟಿಸಿ ನೌಕರರ ಬೇಡಿಕೆಗಳನ್ನು ಮಾನವೀಯ ನೆಲೆಯಲ್ಲಿ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Gopal poojary

ಹೆಮ್ಮಾಡಿ ಸಮೀಪದ ಕಟ್ಬೇಲ್ತೂರಿನಲ್ಲಿ ಸೋಮವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸರ್ಕಾರ ಕಳೆದ ಡಿ.10 ರಂದು ನೌಕರ ಸಂಘಟನೆಯ ಪ್ರತಿನಿಧಿಗಳೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಒಂದು ಬೇಡಿಕೆಯನ್ನು ಹೊರತು ಪಡಿಸಿ ಉಳಿದ 9 ಬೇಡಿಕೆಯನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿದ್ದರೂ, ಈವರೆಗೂ ಭರವಸೆ ಈಡೇರದ ಕಾರಣದಿಂದಾಗಿ ನೌಕಕರು ಪ್ರತಿಭಟನೆಯ ದಾರಿ ಹಿಡಿಯುವಂತಾಗಿದೆ. ರಾಜ್ಯದಲ್ಲಿ ಈ ಹಿಂದೆ ಯಾವುದೇ ಸರ್ಕಾರದ ಅವಧಿಯಲ್ಲಿಯೂ ಮುಷ್ಕರ ನಿರತ ನೌಕರರನ್ನು ಕೆಲಸದಿಂದ ವಜಾ ಮಾಡುವ ಕೆಲಸಗಳು ನಡೆದಿಲ್ಲ. ಮುಕ್ತ ಮನಸ್ಸಿನಿಂದ ಸಂಘಟನೆಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು. ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ನೌಕರರಿಗೆ ಮಾನವೀಯ ನೆಲೆಯಲ್ಲಿ ಮಾರ್ಚ್ ತಿಂಗಳ ಸಂಬಳವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಷ್ಟದಲ್ಲಿ ಇದ್ದ ನಿಗಮವನ್ನು ಲಾಭದಾಯಕವಾಗುವಂತೆ ಕೆಲಸ ಮಾಡಿದ್ದೇನೆ. ರಾಷ್ಟ್ರಕ್ಕೆ ಮಾದರಿ ಸಾರಿಗೆ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ನಿಗಮಗಳನ್ನು ಖಾಸಗಿಯವರಿಗೆ ನೀಡದೆ ಸರ್ಕಾರದ ಅದೀನದಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಲ್ಲದೇ ಕೊರೊನಾ ಎಚ್ಚರಿಕೆ ಬೇಕು ಮಹಾಮಾರಿ ಕೊರೊನಾ ತೀವೃವಾಗಿ ಹಬ್ಬುತ್ತಿರುವುದರಿಂದಾಗಿ ಅದರ ನಿಯಂತ್ರಣಕ್ಕಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಸಾಕಷ್ಟು ಕೆಲಸ ಮಾಡುತ್ತಿದೆ. ಸಾರ್ವಜನಿಕರಾದ ನಾವು ಕೆಲವೊಂದು ಸ್ವಯಂ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಮಯ ಇದಾಗಿರುವುದರಿಂದ, ಮದುವೆ ಸೇರಿದಂತೆ ಯಾವುದೆ ಕಾರ್ಯಕ್ರಮಕ್ಕೂ ಕುತ್ತು ಬಾರದಂತೆ ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ಕಡಿಮೆ ಸಂಖ್ಯೆ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಬೇಕು ಎಂದು ವಿನಂತಿ ಮಾಡಿದ ಅವರು, ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದೊಂದಿಗೆ ಜನರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!