ಉಳ್ಳವರೇ ಭೂಮಿ ಒಡೆಯ ಕಾನೂನು ತರಲು ಸರ್ಕಾರ ಮುಂದಾಗಿದೆ : ಸಿದ್ದರಾಮಯ್ಯ

ಬೆಂಗಳೂರು : (ಜೂ.13) ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಉಳ್ಳವರೇ ಭೂಮಿ ಒಡೆಯರು ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರುವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಬಗ್ಗೆ ಚರ್ಚೆ ನಡೆಸಲು ಸಿದ್ದರಾಮಯ್ಯ ಅವರು ತಮ್ಮ ಕಚೇರಿಯಲ್ಲಿ ಇಂದು ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದರು. ಸಭೆ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

Siddaramayya

ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ಸರ್ಕಾರ ತಿದ್ದುಪಡಿತ ತರಲು ಮುಂದಾಗಿದೆ. ಕಾಯಿದೆಯಲ್ಲಿನ ಕೆಲ ಅಂಶಗಳನ್ನು ಬದಲಾವಣೆ ಮಾಡುವುದು ಸರ್ಕಾರದ ಉದ್ದೇಶ.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೂ ಸುಧಾರಣೆ ಕಾಯಿದೆ ಜಾರಿಗೆ ತಂದ ಬಳಿಕ ಉಳುವವನೇ ಹೊಲದ ಒಡೆಯ ಎಂದಾಯಿತು. ಯಾರ್ಯಾರು ಭೂಮಿ ಒಡೆಯರು ಆಗಬಹುದು ಎಂಬುದನ್ನು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಗುತ್ತಿಗೆ ಆಧಾರದ ಮೇಲೆ ಭೂಮಿ ಉಳುಮೆ ಮಾಡುತ್ತಿದ್ದವರಿಗೆ ಇದರಿಂದ ಅನುಕೂಲವಾಗಿತ್ತು. ಶ್ರೀಮತಿ ಇಂದಿರಾಗಾಂಧಿ ಮತ್ತು ದೇವರಾಜ ಅರಸು ಅವರ ಸರ್ಕಾರ ಉಳುವವನೇ ಭೂಮಿ ಒಡೆಯ ಎಂದು ಮಾಡಿದರೆ ಈಗಿನ ಬಿಜೆಪಿ ಸರ್ಕಾರ ಉಳ್ಳವರೇ ಭೂಮಿ ಒಡೆಯ ಎಂದು ಮಾಡಲು ಮುಂದಾಗಿದೆ.
ಭೂ ಸುಧಾರಣೆ ಕಾಯಿದೆಯ 79 ಎ.ಬಿ.ಸಿ ಮತ್ತು 80 ಹಾಗೂ ಸೆಕ್ಷನ್ 63 ಮುಖ್ಯ ತಿದ್ದುಪಡಿಗಳನ್ನು ಪೂರ್ವಾನ್ವಯ ಆಗುವಂತೆ ರದ್ದು ಮಾಡುವುದು, ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ವಜಾ ಮಾಡುವುದು ಸರ್ಕಾರದ ಉದ್ದೇಶ. ಕಾನೂನಿನಲ್ಲಿ ನ್ಯೂನತೆ ಇದ್ದರೆ ಮಾತ್ರ ಕಾಲ ಕಾಲಕ್ಕೆ ಬದಲಾವಣೆ ಮಾಡಬೇಕು. ಅದು ಬಿಟ್ಟು ನೆಗಡಿ ಬಂದಿದೆ ಎಂಬ ಕಾರಣಕ್ಕೆ ಮೂಗು ಕುಯ್ಯುವುದು, ಗಾಯವಾಗಿದೆ ಎಂದು ಕಾಲು ಕತ್ತರಿಸುವ ಕೆಲಸಕ್ಕೆ ಕೈ ಹಾಕಬಾರದು. ಕಾರ್ಪೊರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ, ಬಂಡವಾಳ ಶಾಹಿಗಳಿಗೆ ಕೃಷಿ ಭೂಮಿ ಧಾರೆ ಎರೆಯಲು ಸರ್ಕಾರ ಮುಂದಾಗಿದೆ. ಉಳುವವರಿಗೆ ಭೂಮಿ ಸಿಗಬೇಕು. ಒಬ್ಬರಿಗೆ ಉದ್ಯೋಗ ದೊರಕಬೇಕು ಎಂಬ ಕಾರಣಕ್ಕೆ ಈ ಹಿಂದೆ ಭೂ ಸುಧಾರಣೆ ಕಾಯಿದೆ ಜಾರಿಗೆ ತರಲಾಗಿತ್ತು.

Siddaramayya

ಕಾಯಿದೆ ತಿದ್ದುಪಡಿಯಿಂದ ಭೂ ಮಾಫಿಯಾ ಆರಂಭವಾಗುತ್ತದೆ. ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಾಗುತ್ತದೆ. ಶ್ರೀಮಂತರು ಭೂಮಿ ಖರೀದಿ ಮಾಡಿ ಲ್ಯಾಂಡ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ಇದರಿಂದ ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗಿ ಭೂಮಿ ಕಳೆದುಕೊಂಡು ಅವರು ಕೃಷಿ ಕೂಲಿ ಕಾರ್ಮಿಕರಾಗುತ್ತಾರೆ. ಹೀಗಾಗಿ ಸಂಪುಟದ ನಿರ್ಣಯವನ್ನು ತೀವ್ರವಾಗಿ ವಿರೋಧಿಸುತ್ತೇವೆ. ಈ ಕುರಿತು ಪಕ್ಷದ ಹಿರಿಯ ನಾಯಕರು, ರೈತರ ಸಂಘಟನೆಗಳ ಮುಖಂಡರ ಜೊತೆ ಮತ್ತೊಂದು ಸುತ್ತಿನಲ್ಲಿ ಸಮಗ್ರವಾಗಿ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಸಭೆಯಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿ.ಎಂ. ಇಬ್ರಾಹಿಂ, ರಮೇಶ್ ಕುಮಾರ್, ಸಲೀಂ ಅಹಮದ್, ಈಶ್ವರ ಖಂಡ್ರೆ, ದಿನೇಶ್ ಗುಂಡೂರಾವ್, ಡಾ. ಎಚ್.ಸಿ. ಮಹಾದೇವಪ್ಪ, ಟಿ.ಬಿ. ಜಯಚಂದ್ರ, ನಸೀರ್ ಅಹಮದ್, ಜಮೀರ್ ಅಹಮದ್, ವಿ.ಎಸ್. ಉಗ್ರಪ್ಪ, ಪುಷ್ಪ ಅಮರನಾಥ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ್, ಡಾ. ಅಜಯಸಿಂಗ್, ನರೇಂದ್ರ ಸ್ವಾಮಿ, ಐವಾನ್ ಡಿಸೋಜ ಮತ್ತಿರರರು ಭಾಗವಹಿಸಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!