ಸೋನಿಯಾ ಗಾಂಧಿ ವಿರುದ್ಧದ ಎಫ್ಐಆರ್ ಹಿಂಪಡೆಯದಿದ್ದರೆ ಉಗ್ರ ಹೋರಾಟ : ಡಿ.ಕೆ. ಶಿವಕುಮಾರ್

ಬೆಂಗಳೂರು : (ಮೇ.21) ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಶ್ನಿಸಿರುವುದರ ವಿರುದ್ಧದ ಪ್ರಕರಣವನ್ನು 24 ತಾಸಿನಲ್ಲಿ ಹಿಂಪಡೆದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಒಂದು ವೇಳೆ ವಾಪಸು ಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸೋನಿಯಾ ಗಾಂಧಿ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ತಂಡ ಇಂದು ಸಂಜೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಮ್ಮ ಮನವಿಯನ್ನು ಸಲ್ಲಿಸಿತು. ಈ ವೇಳೆ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್ ಉಗ್ರಪ್ಪ ಉಪಸ್ಥಿತರಿದ್ದರು.

Dk shivakumar

ಸಿಎಂ ಭೇಟಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರು ವಿರೋಧ ಪಕ್ಷದ ನಾಯಕಿಯಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅದು ಅವರ ಹಕ್ಕು ಹಾಗೂ ಕರ್ತವ್ಯ. ಆದರೆ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷಗಳ ಧ್ವನಿಯನ್ನು ದಮನ ಮಾಡುವ ಪ್ರಯತ್ನ ಮಾಡುತ್ತಿರುವುದು ಆಘಾತಕಾರಿಯಾಗಿದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ವಕೀಲರಾದ ಪ್ರವೀಣ್ ಕುಮಾರ್ ಎಂಬುವವರು ತಮ್ಮ ಸಂಬಂಧಿ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದು, ದೂರು ದಾಖಲಿಸಿ ಎಫ್ಐಆರ್ ದಾಖಲಿಸಲಾಗಿದೆ. ಇದು ಸೂಕ್ಷ್ಮ ವಿಚಾರವಾಗಿದ್ದು, ದೇಶದಲ್ಲಿ ದೊಡ್ಡ ಸಂಚಲನ ಉಂಟು ಮಾಡುವ ವಿಚಾರ. ಅಷ್ಟೇ ಅಲ್ಲ ಇದು ದ್ವೇಷ ಮನೋಭಾವ ಹಾಗೂ ಅಧಿಕಾರ ದುರುಪಯೋಗದ ವಿಚಾರವಾಗಿದೆ. ಇಂತಹ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಯಾವ ಮಟ್ಟಿಗೆ ಕೆಲಸ ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸಿದೆ.

Dk shivakumar

ಈ ವಿಚಾರವಾಗಿ ನಾವು ಹೋರಾಟ ಮಾಡುವ ಮುನ್ನ ಚರ್ಚಿಸಬೇಕು ಅಂತಾ ಬೆಳಗ್ಗೆ ಗೃಹಸಚಿವ ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ, ಈಗ ಮುಖ್ಯಮಂತ್ರಿಗಳ ಜತೆ ಮಾತನಾಡಲು ಆಗಮಿಸಿದೆವು. ಈ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ನಾವು ಹೋರಾಟ ಮಾಡಲು ಅವಕಾಶ ನೀಡಬಾರದು, ಅಂತಾ ನಾವು ಆಗ್ರಹಿಸಿದೇವು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು 24 ಗಂಟೆಯಲ್ಲಿ ಎಫ್ಐಆರ್ ಹಿಂಪಡೆದು ಮಾಡಿ ಬಿ ರಿಪೋರ್ಟ್ ಸಿದ್ಧಪಡಿಸಲಾಗುವುದು, ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಂದೊಮ್ಮೆ ವಾಪಸು ಪಡೆಯದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಗುಡುಗಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!