ನಾಳೆಯಿಂದ 1 ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ ಬಂದ್, ಮದುವೆ, ಸಭೆ-ಸಮಾರಂಭಗಳಿಗೆ ನಿರ್ಬಂಧ ಆದೇಶ ಹೊರಡಿಸಿದ ಯಡಿಯೂರಪ್ಪ

ಬೆಂಗಳೂರು : (ಮಾ.13) ಮಾರಣಾಂತಿಕ ಕೊರೋನಾ ವೈರಸ್ ಹರಡದಂತೆ ತಡೆಯಲು ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವಂತೆ ಮತ್ತು ಮದುವೆ, ಸಭೆ-ಸಮಾರಂಭಗಳಲ್ಲಿ 100ಕ್ಕಿಂತಲೂ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಒಂದು ವಾರಗಳ ಕಾಲ ಕ್ರೀಡಾ ಕಾರ್ಯಕ್ರಮಗಳು, ನೈಟ್ ಕ್ಲಬ್, ಪಬ್, ಮೇಳ, ಸೆಮಿನಾರ್ ಗಳು ಮತ್ತು ಜಾತ್ರೆಗಳನ್ನು ಬಂದ್ ಮಾಡಲಾಗುತ್ತಿದೆ. ಒಂದು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

B S Yediyurappa

ಸರ್ಕಾರ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳು, ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಪರೀಕ್ಷೆಗಳು, ಸರ್ಕಾರಿ ಕಚೇರಿಗಳು, ಅಧಿವೇಶನ ಅಬಾಧಿತವಾಗಿ ನಡೆಯಲಿವೆ. ವಿಶ್ವವಿದ್ಯಾಲಯ, ಕಾಲೇಜುಗಳಿಗೂ ಒಂದು ವಾರ ರಜೆ ಘೋಷಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ಕರೊನಾ ವೈರಸ್ ಸೋಂಕಿನಿಂದ ಕಲಬುರಗಿಯ ವ್ಯಕ್ತಿಯೊಬ್ಬರು ದುರದೃಷ್ಟವಶಾತ್ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಡಾ. ದೇವಿ ಶೆಟ್ಟಿ ಹಾಗೂ ವಿವಿಧ ವೈದ್ಯಕೀಯ ಸಂಘಟನೆಗಳೊಂದಿಗೆ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಈ ನಿರ್ಧಾರವನ್ನು ಪ್ರಕಟಿಸಿದರು. ಈ ಸೋಂಕು ತಗುಲದೆ ಇರುವಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಎಲ್ಲ ಖಾಸಗಿ ಆಸ್ಪತ್ರೆಯವರು ಈ ಸೋಂಕಿನ ಲಕ್ಷಣ ಇರುವ ರೋಗಿಗಳು ಬಂದಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಗಮನಕ್ಕೆ ತರುವಂತೆ ಹೇಳಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!