ಮಕ್ಕಳ ಸೃಜನಶೀಲತೆಗೆ ಟಿ.ವಿ. ಮತ್ತು ಸಾಮಾಜಿಕ ಜಾಲತಾಣಗಳು ಮಾರಕ ಕು|ಸಂಹಿತಾ ಜಿ.ಪಿ.

ಉಡುಪಿ : (ನ.14) ಇಂದಿನ ಮಕ್ಕಳು ಅತಿಯಾಗಿ ಟಿ.ವಿ. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ್ದಾರೆ. ಅವರನ್ನು ಅಲ್ಲಿಂದ ಹೊರ ತಂದು ಅವರು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವ ಸವಾಲು ಹೆತ್ತವರಿಗೆ ಮತ್ತು ಶಿಕ್ಷಕರಿಗಿದೆ. ಇಲ್ಲವಾದಲ್ಲಿ ಮಕ್ಕಳ ಸೃಜನಶೀಲತೆ ಕಮರುತ್ತದೆ. ಹಾಗಂತ ಇವನ್ನು ಒತ್ತಡ ಹಾಕುವ ಮೂಲಕ ಬಗೆಹರಿಸಲು ಸಾಧ್ಯವಿಲ್ಲ. ಮಕ್ಕಳ ಮನಸ್ಸುಗಳು ಮುಗ್ದವಾಗಿರುತ್ತದೆ ಅದು ಘಾಸಿಯಾಗದಂತೆ ಶಿಕ್ಷಕರು ಮತ್ತು ಹೆತ್ತವರು ವರ್ತಿಸಬೇಕು. ಅಕಾಡೆಮಿಕ್ ಶಿಕ್ಷಣದೊಂದಿಗೆ ಕಲಾ ಪ್ರಕಾರಗಳನ್ನು ಮಕ್ಕಳಿಗೆ ಪರಿಚಯಿಸಬೇಕು. ಇದು ಸೃಜನಶೀಲವಾಗಿ ಮಕ್ಕಳು ಬೆಳೆಯಲು ಕಾರಣವಾಗುತ್ತದೆ ಎಂದು ಝೀ ಕನ್ನಡ ವಾಹಿನಿಯ “ಕನ್ನಡ ಕಣ್ಮಣಿ” ರಿಯಾಲಿಟಿ ಶೋ ವಿಜೇತೆ ಕು| ಸಂಹಿತಾ ಜಿ.ಪಿ. ಅವರು 2017ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂರವರ ಜನುಮ ದಿನದ ಹಿನ್ನಲೆಯಲ್ಲಿ ಆಚರಿಸುವ ಮಕ್ಕಳ ದಿನಾಚರಣೆಯ ಪ್ರಯುಕ್ತ ಉದ್ಯಾವರ ಶ್ರೀ ವಿಠೋಬ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ಹಮ್ಮಿಕೊಂಡ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ 10ನೇ ವರ್ಷದ ಸಾಮೂಹಿಕ ನೃತ್ಯ ಸ್ಪರ್ಧೆ “ಯು.ಎಫ್.ಸಿ. ಮಕ್ಕಳ ಹಬ್ಬ 2019” ಉದ್ಘಾಟಿಸಿ ನುಡಿದರು.

Udupi

ಅವರು ಮುಂದುವರಿಯುತ್ತಾ ಇಂದಿನ ಕಾಲದಲ್ಲಿ ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಭಯೋತ್ಪಾದನೆ, ಕೋಮುವಾದ, ಹಿಂಸೆಗಳಿಗೆ ಬಲಿಯಾಗುತ್ತಿದ್ದಾರೆ ಇದಕ್ಕೆ ಇಂದಿನ ಸಿನಿಮಾ ಮತ್ತು ಸಾಮಾಜಿಕ ಜಾಲತಾಣಗಳು ಕಾರಣವಾಗಿದೆ. ಎಷ್ಟೋ ಕಾರ್ಖಾನೆಗಳಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ಶೋಷಣೆಗೆ ಒಳಗಾಗಿದ್ದಾರೆ. ಇದೀಗ ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಬಗ್ಗೆ ನಿಗಾವಹಿಸುತ್ತಿದೆ. 6-14 ತನಕ ಕಡ್ಡಾಯ ಶಿಕ್ಷಣ ಜಾರಿಯಲ್ಲಿದೆ. ಈ ಕಾನೂನು ಯಶಸ್ವಿಯಾಗುವಂತೆ ಹೆತ್ತವರು ಪ್ರಯತ್ನಿಸಬೇಕು. ಆಗ ಮಾತ್ರ ನೆಹರೂರವರು ಹೇಳಿದ ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಮಾತು ಅರ್ಥ ಪಡೆದುಕೊಳ್ಳುತ್ತದೆ. ಇಂತಹ ಕಾರ್ಯಕ್ರಮಗಳು ಇದಕ್ಕೆ ಪೂರಕ ಎಂದರು.

Advertising

ಅಧ್ಯಕ್ಷತೆಯನ್ನು ವಹಿಸಿದ ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ| ಗಣನಾಥ ಎಕ್ಕಾರು ಮಾತನಾಡುತ್ತಾ ಇಂದು ಮಕ್ಕಳ ದಿನಾಚರಣೆಗಳು ಅರ್ಥವನ್ನು ಕಳೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ಇಂತಹ ಆಚರಣೆ ಜವಾಹರ ಲಾಲ್ ನೆಹರೂರವರ ಆಶಯವನ್ನು ಗಟ್ಟಿಗೊಳಿಸುತ್ತದೆ. ದೇಶದಲ್ಲಿ ಸಾಂವಿಧಾನಿಕ ಮೌಲ್ಯ, ಪ್ರಗತಿ ಪರತೆ, ಸೌಹಾರ್ದತೆ ಗಟ್ಟಿಯಾಗಲು, ದೇಶ ಚಂದ್ರನತ್ತ ಸಾಗಲು ನೆಹರೂರವರ ಕೊಡುಗೆ ಮಹತ್ವವಾದುದು. ನೆಹರೂರವರನ್ನು ಬಿಟ್ಟು ಬೇರೆ ಯಾರೂ ಕೂಡಾ ಪ್ರಧಾನಿಯಾಗಿದ್ದರೆ ದೇಶ ಸ್ವರೂಪವೇ ಬೇರೆಯಾಗಿರುತ್ತಿತ್ತು. ಹಾಗಾಗಿಯೇ ನೆಹರೂರವರು ಪ್ರಾತಃ ಸ್ಮರಣೀಯರು ಎಂದ ಅವರು ಮಕ್ಕಳ ವ್ಯಕ್ತಿತ್ವವನ್ನು ಪಠ್ಯ ಮಾತ್ರ ರೂಪಿಸುವುದಲ್ಲ ಪಠ್ಯ ಪೂರಕ ಚಟುವಟಿಕೆಗಳೂ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಹೆತ್ತವರು ಆಲೋಚಿಸಬೇಕು. ಮನುಷ್ಯ ಹುಟ್ಟುವಾಗ ವಿಶ್ವಮಾನವ ಆಗಿರುತ್ತಾನೆ ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ. ನಾವು ಮಕ್ಕಳನ್ನು ವಿಶ್ವ ಮಾನವರನ್ನಾಗಿ ಮಾಡುವಲ್ಲಿ ಶ್ರಮಿಸಬೆಕು ಎಂದರು.
ಮಕ್ಕಳು ತಮ್ಮ ಆಸಕ್ತಿ ಕ್ಷೇತ್ರವನ್ನು ಗುರುತಿಸಿಕೊಂಡು ಮುಂದುವರಿಯಿರಿ ಆಗ ನೀವು ಯಶಸ್ವೀಯಾಗುತ್ತೀರಿ. ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಇಂತಹ ಕಲಾ ಪ್ರಕಾರಗಳು ಮಹತ್ವದ ಪಾತ್ರ ವಹಿಸುತ್ತದೆ. ಈ ಹಬ್ಬ ನೆಹರೂರವರ ಜನ್ಮ ದಿನದ ನೆನಪಿನಲ್ಲಿ ಜರಗುತ್ತಿದೆ. ನೆಹರೂರವರನ್ನು ಒಬ್ಬ ರಾಜಕಾರಣಿಯನ್ನಾಗಿ ನೋಡದೆ ಈ ದೇಶದ ಪ್ರಥಮ ಪ್ರಧಾನಿಯಾಗಿ ನೋಡಿದಾಗ ಮಾತ್ರ ಅವರ ಸಾಧನೆಗಳು ಅರಿವಾಗುತ್ತದೆ. ಇಂದಿನ ಈ ಭಾರತದ ಅಭಿವೃದ್ಧಿಗೆ ಅವರ ದೂರಾಲೋಚನೆಗಳೇ ಕಾರಣ. ನೆಹರೂರವರ ಕೆಲಸ ಕಾರ್ಯಗಳನ್ನು 70 ವರ್ಷದ ಹಿಂದಿನ ಕಾಲದಲ್ಲಿ ನಿಂತು ವಿಶ್ಲೇಷಿಸಬೇಕು ವಿನಹಃ ಈಗ ನಿಂತು ಋಣಾತ್ಮಕವಾಗಿ ವಿಶ್ಲೇಷಿಸುವುದಲ್ಲ. ಇದು ನಾವು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ ಎಂದು ಅತಿಥಿಯಾಗಿ ಆಗಮಿಸಿದ ಉಡುಪಿ ಎಂ.ಜಿ.ಎಂ. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಅಧ್ಯಕ್ಷರಾದ ಶ್ರೀ. ಶ್ರೇಯಸ್ ಜಿ. ಕೋಟ್ಯಾನ್ ನುಡಿದರು.

Udupi

ಅತಿಥಿಗಳಾಗಿ ಆಗಮಿಸಿರುವ ಉಡುಪಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಉಮಾ ಪಿ. ಮತ್ತು ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಗಂಧಿ ಶೇಖರ್ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ನಿರ್ದೇಶಕರಾದ ಶ್ರೀಮತಿ ಚಂದ್ರಾವತಿ ಭಂಡಾರಿ, ಶ್ರೀ ಶರತ್ ಕುಮಾರ್ ಉಪಸ್ಥಿತರಿದ್ದರು
ಸಮಾರಂಭದ ಉದ್ಘಾಟಕಿ ಕು| ಸಂಹಿತಾ ಜಿ.ಪಿ. ಇವರನ್ನು ಅತಿಥಿಗಳು ಉದ್ಯಾವರದ ಮಕ್ಕಳ ಪರವಾಗಿ ಸನ್ಮಾನಿಸಿದರು.

Udupi
ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ತಿಲಕ್ ರಾಜ್ ಸಾಲ್ಯಾನ್ ಸ್ವಾಗತಿಸಿದರು. ನಿರ್ದೇಶಕ ಶ್ರೀ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು.
ಉದ್ಘಾಟನಾ ಸಮಾರಂಭಕ್ಕೆ ಮುನ್ನ ಉದ್ಯಾವರ ಹಿಂದೂ ಶಾಲೆಯಿಂದ ಸಮಾರಂಭದ ಸ್ಥಳಕ್ಕೆ ಉದ್ಘಾಟಕಿ ಜಿ.ಪಿ. ಸಂಹಿತಾಳ ಸಮೇತ ಮಕ್ಕಳ ಮೆರವಣಿಗೆ ಜರಗಿತು.

CATEGORIES
Share This

COMMENTS

Wordpress (0)
Disqus ( )
error: Content is protected !!