ಸಂಕಷ್ಟದಲ್ಲಿರುವ ರೇಶ್ಮೆ ಬೆಳೆಗಾರರಿಗೆ ಸರಕಾರ ಸಹಾಯ ನೀಡಲಿ: ಎಸ್‍ಡಿಪಿಐ

 

ಬೆಂಗಳೂರು: (ಅ.14)  ಕರ್ನಾಟಕ ರಾಜ್ಯದ ರೇಶ್ಮೆ ಬಟ್ಟೆಗಳು ದೇಶದಾದ್ಯಂತ ಪ್ರಸಿದ್ದಿ ಪಡೆದಿದೆಯಾದರೂ ರಾಜ್ಯದ ರೇಶ್ಮೆ ಬೆಳೆಗಾರರ ಸಮಸ್ಯೆಗಳನ್ನು ಮಾತ್ರ ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲಾರ, ರಾಮನಗರ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರೇಶ್ಮೆಯನ್ನು ಬಹು ವಿಧದಲ್ಲಿ ಕಸುಬಾಗಿ ಹೊಂದಿರುವ ಸಾವಿರಾರು ಕುಟುಂಬಗಳು ಈಗ ಸಂಕಷ್ಟದ ಹಾದಿಯಲ್ಲಿವೆ. ರೇಶ್ಮೆ ಬೆಳೆಗಾರರ ಹಾಗೂ ರೇಶ್ಮೆ ಕೈಗಾರಿಕೆದಾರರಿಗೆ ರಾಜ್ಯ ಸರಕಾರ ತಕ್ಷಣ ನೆರವು ಮತ್ತು ಪ್ರೋತ್ಸಾಹದಾಯಕ ಪ್ಯಾಕೇಜ್‍ಗಳನ್ನು ಒದಗಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಸರಕಾರವನ್ನು ಆಗ್ರಹಿಸಿದ್ದಾರೆ.

Ilyas tumbe

ಚೀನಾ ದೇಶದಿಂದ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಆಮದುಗೊಳ್ಳುತ್ತಿರುವ ರೇಶ್ಮೆ ಬಟ್ಟೆಗಳು ರಾಜ್ಯದ ರೇಶ್ಮೆ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಚೀನಾದ ಬಂಡವಾಳಶಾಹಿ ಕಂಪೆನಿಗಳು ರಾಜ್ಯದಲ್ಲಿ ಬಡ ರೈತರಿಗೆ ಬಂಡವಾಳವನ್ನು ಒಪ್ಪಂದದ ಆಧಾರದಲ್ಲಿ ನೀಡಿ ರೇಶ್ಮೆ ಸ್ಥಾವರಗಳನ್ನು ಸ್ಥಾಪಿಸುತ್ತಿವೆ. ಇದರಿಂದ ಆ ಸ್ಥಾವರರಗಳಿಗೆ ಒಳಪಟ್ಟ ರೈತರು ಕಡಿಮೆ ಬೆಲೆಯಲ್ಲಿ ರೇಶ್ಮೆಯನ್ನು ನೀಡಬೇಕಾಗಿ ಬರುವುದರಿಂದ ಉಳಿದ ರೈತರು ಸೂಕ್ತ ಬೆಲೆಯಿಲ್ಲದೆ ರೇಶ್ಮೆ ಬೆಳೆಗಾರಿಕೆಯನ್ನೇ ಕೈ ಬಿಡುವಂತಹ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಬಂಡವಾಳಶಾಹಿಗಳು ಬೆಳೆಗಾರರನ್ನು ಇನ್ನಿಲ್ಲದಂತೆ ಶೋಷಣೆಗೆ ಒಳಪಡಿಸುತ್ತಿದ್ದಾರೆ.

ರಾಜ್ಯದ ಆರ್ಥಿಕತೆಯಲ್ಲಿ ಒಂದಷ್ಟು ಕೊಡುಗೆಯನ್ನು ನೀಡಿದ ಹಾಗೂ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ರೇಶ್ಮೆ ಬೆಳೆಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ರಾಜ್ಯ ಸರಕಾರ ಮಾರುಕಟ್ಟೆ ನಿಯಂತ್ರಣ, ಸಬ್ಸಿಡಿ, ಪ್ರೋತ್ಸಾಹಕರ ಪ್ಯಾಕೇಜ್, ರೇಶ್ಮೆ ಬೆಳೆಗಾರರ ಮಕ್ಕಳಿಗೆ ಶೈಕ್ಷಣಿಕ ಸಹಾಯ, ಬಂಡವಾಳಶಾಹಿಗಳಿಂದ ನಡೆಯುವ ಶೋಷಣೆಯನ್ನು ತಡೆಯುವುದು ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕೆಂದು ಇಲ್ಯಾಸ್ ಮುಹಮ್ಮದ್ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ರೇಶ್ಮೆ ಬೆಳೆಗಾರರು ನಡೆಸುವ ಯಾವುದೇ ಹೋರಾಟಕ್ಕೆ ಎಸ್‍ಡಿಪಿಐ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

CATEGORIES
Share This

COMMENTS

Wordpress (0)
Disqus (0 )
error: Content is protected !!