ತಾಲೂಕಿನಲ್ಲಿ ಸೋಂಕು ತಡೆಗೆ ಸರಕಾರವು ಅಗತ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಮನವಿ.
ಪುತ್ತೂರು : (ಮೇ.04) ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನಲ್ಲಿ ಸೋಂಕು ತಡೆಗೆ ಸರಕಾರವು ಅಗತ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ತಹಶೀಲ್ದಾರ್ ರಮೇಶ್ ಬಾಬು ಮುಖಾಂತರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಕೆಳಕಂಡ ಅಂಶಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.
ಕೋವಿಡ್ ಮಹಾಮಾರಿಯು ದೇಶವ್ಯಾಪಿ ಹಬ್ಬಿದೆ. ಪುತ್ತೂರಲ್ಲೂ ಅನೇಕರಲ್ಲಿ ಈ ವೈರಸ್ ಕಾಣತೊಡಗಿದ್ದು ಕೆಲವು ಕಡೆ ಸಾವುಗಳು ಸಂಭವಿಸಿವೆ. ಆದ್ದರಿಂದ, ದಯವಿಟ್ಟು ನಾವು ಕೆಳಗೆ ನೀಡಿರುವ ಅಂಶಗಳನ್ನು ಗಮನಿಸಿಕೊಂಡು ಜನರ ನೋವಿಗೆ ಸ್ಪಂದಿಸಬೇಕೆಂದು ಪುತ್ತೂರಿನ ಜನತೆಯ ಪರವಾಗಿ ಸರಕಾರಕ್ಕೆ ಒತ್ತಾಯಿಸುತ್ತಿದ್ದೇವೆ.
1. ಪುತ್ತೂರಿನಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಸಾಕಷ್ಟು ಹೊರ ರೋಗಿಗಳು ದಾಖಲಾಗಿದ್ದು ತಾವು ಅಗತ್ಯವಾಗಿ ಶಾಲೆ, ಸಭಾಭವನ ಮುಂತಾದ ಕಡೆ ತಾತ್ಕಾಲಿಕ ಕೋವಿಡ್ ಬೆಡ್ ಗಳನ್ನು ನಿರ್ಮಿಸಿ ಚಿಕಿತ್ಸೆ ನೀಡುವುದು.
2. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ದಾದಿಯರೂ ಇಲ್ಲದೆ ಸಮಸ್ಯೆಯನ್ನು ಎದುರಿಸುತ್ತಿದೆ. ಆದ್ದರಿಂದ ವೈದ್ಯರ ಹಾಗೂ ದಾದಿಯರನ್ನು ನೇಮಿಸುವುದು.
3. ಸಣ್ಣ ಪುಟ್ಟ ಅನಾರೋಗ್ಯ ಹೊಂದಿರುವವರ ಆರೋಗ್ಯ ಪರೀಕ್ಷೆಗಾಗಿ ಗ್ರಾಮೀಣ ಮಟ್ಟದಲ್ಲಿ ಕ್ಲಿನಿಕ್ ಆರಂಭಿಸುವುದು.
4. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಸೇವೆಗಾಗಿ ವಾಹನವನ್ನು ಮೀಸಲಿಡುವುದು.
5. ಪ್ರತಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಬೆಡ್ ಗಳ ವಿವರಗಳನ್ನು ಜನರಿಗೆ ನೀಡುವುದು.
6. ಕೋವಿಡ್ ಲಸಿಕೆಗೆಗಾಗಿ ಜನರು ಆಸ್ಪತ್ರೆಯ ಮುಂಭಾಗ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಪ್ರತಿ ಕ್ಲಿನಿಕ್ , ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಿಬಿರಗಳನ್ನು ನಡೆಸಿ ಉಚಿತ ಲಸಿಕೆ ನೀಡುವುದು.
7. ಈಗಾಗಲೇ ರಕ್ತದ ಅವಶ್ಯಕತೆ ಕಂಡುಬಂದಿದ್ದು ಲಸಿಕೆ ಪಡೆಯುವ ಮುಂಚಿತವಾಗಿ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸುವುದು.

Advertisement
8. ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯ ಬೆಡ್ ಮೀಸಲಿಡಬೇಕು. ಪ್ರತಿ ನಿತ್ಯ ಎಷ್ಟು ಬೆಡ್ ಗಳು ಖಾಲಿ ಇದೆ ಎಂಬ ಮಾಹಿತಿ ಪ್ರಕಟಿಸಬೇಕು.
9. ಅಗತ್ಯವಿರುವ ಸಂಘ ಸಂಸ್ಥೆಗಳಿಗೆ ಅವರ ಈ ಹಿಂದಿನ ಸೇವೆಯನ್ನು ಪರಿಗಣಿಸಿ ಜನರಿಗೆ ಅಗತ್ಯ ಸೇವೆ ನೀಡಲು (ದುರುಪಯೋಗವಾಗದಂತೆ) ಪಾಸು ವಿತರಿಸುವುದು.
10. ಪೇಟೆಯಲ್ಲಿ ಪ್ರತಿದಿನ ಆಗುವ ಜನದಟ್ಟಣೆಯನ್ನು ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿನ ಜನ ಸ್ಥಳೀಯವಾಗಿ ಅಗತ್ಯ ವಸ್ತುಗಳು ಖರೀದಿಸುವಂತೆ ಉತ್ತೇಜಿಸುವುದು.
11. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕನಿಷ್ಟ ಪಕ್ಷ 5 ಆಕ್ಸಿಜನ್ ಸಿಲಿಂಡರ್ ಮೀಸಲಿಡಬೇಕು.
12. ಕೊರೊನಾ ಹೊರತುಪಡಿಸಿದಂತೆ ಅನೇಕ ಇತರ ರೋಗಗಳನ್ನು ಗಣನೆಗೆ ತೆಗೆದುಕೊಳ್ಳದೆ ಇದ್ದರೆ ಅದು ಕೂಡ ದೊಡ್ಡ ದೊಡ್ಡ ಪರಿಣಾಮವನ್ನುಂಟು ಮಾಡುವ ಸಾಧ್ಯತೆಯಿದ್ದು ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು.
13. ಲಾಕ್ ಡೌನ್ ನಿಂದ ಕಂಗೆಟ್ಟ ಜನತೆಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸಾಲ ಮರುಪಾವತಿ ಹಾಗೂ ತೆರಿಗೆ ಮುಂತಾದವುಗಳಲ್ಲಿ ವಿನಾಯಿತಿ ನೀಡಬೇಕು.
14. ಅಗತ್ಯ ದಿನಸಿ ಸಾಮಾಗ್ರಿಗಳಿಲ್ಲದ ಬಡ ಕುಟುಂಬಕ್ಕೆ ನೆರವಾಗಬೇಕು.
15. ತುರ್ತು ಸಂದರ್ಭದಲ್ಲಿ ಸರಕಾರದ ಜೊತೆ ಕೈ ಜೋಡಿಸಲು ನಮ್ಮ ಯುವಕಾಂಗ್ರೆಸ್ ಸದಸ್ಯರು ಸಿದ್ದರಿದ್ದು ತಾವು ಪಾಸ್ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯುವಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಕಮಲೇಶ್ ಸರ್ವೇದೋಳ ಗುತ್ತು, ಯುವ ಕಾಂಗ್ರಸ್ ಸಿದ್ದೀಕ್ ಸುಲ್ತಾನ್, ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ ಅಶೋಕ್ ಶೆಟ್ಟಿ , ಯುವ ಕಾಂಗ್ರೆಸ್ ನ ಮೋನು ಬಪ್ಪಳಿಗೆ, ಜಯರಾಮ ಆಚಾರ್ಯ, ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಯುವ ಕಾಂಗ್ರೆಸ್ ಮುಖಂಡರಾದ ಹನೀಫ್ ಪುಂಚತ್ತಾರ್, ಗಗನ್ ಶೆಟ್ಟಿ, ದಿನೇಶ್ ಯಾದವ್ ಉಪಸ್ಥಿತರಿದ್ದರು.