ಕೋವಿಡ್ ಸೋಂಕಿತರನ್ನು ಭೇಟಿ ಮಾಡಿ ಮಾನವೀಯತೆ, ಮೆರೆದ ಸಂಸದ ಡಿ.ಕೆ. ಸುರೇಶ್
ರಾಮನಗರ : ( ಜು.14) ಕೋವಿಡ್ ಸೋಂಕಿತರೆಂದರೆ ಸಮಾಜ ಮೂಗು ಮುರಿಯುತ್ತಿರುವ ಸಂದರ್ಭದಲ್ಲಿ ಅವರನ್ನು ನೇರವಾಗಿ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬುವ ಮೂಲಕ ಸಂಸದ ಡಿ.ಕೆ. ಸುರೇಶ್ ಮಾನವೀಯತೆ ಮೆರೆಯುವುದರ ಜತೆಗೆ ರಾಜಕಾರಣಿಗಳಿಗೂ ಆದರ್ಶಪ್ರಾಯರಾಗಿದ್ದಾರೆ. ಹೌದು, ಅದು ರೈತರ ಸಮಸ್ಯೆ ಇರಲಿ, ಕಾರ್ಮಿಕರ ಸಮಸ್ಯೆ ಇರಲಿ, ಸಮಾಜದ ಯಾವುದೇ ವರ್ಗದ ಸಮಸ್ಯೆ ಇದ್ದರೂ ಅಲ್ಲಿ ಮೊದಲ ಸ್ಪಂದನೆ ಸಿಗುವುದು, ಮೊದಲಿಗೆ ಹಾಜರಾಗುವುದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ ಸುರೇಶ್ ಅವರು.
ಸೋಮವಾರ ಸಂಜೆ ರಾಮನಗರ ಜಿಲ್ಲಾ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ ಸುರೇಶ್ ಅವರು, ಅಲ್ಲಿನ ಸೋಂಕಿತರು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಜತೆ ಮಾತುಕತೆ ನಡೆಸಿದರು. ಅವರ ಸಮಸ್ಯೆಗಳನ್ನು ಆಲಿಸಿದರು. ಹೆದರಬೇಡಿ ನಾನಿದ್ದೇನೆ ಎಂದು ಧೈರ್ಯ ಹೇಳಿದರು. ಆತ್ಮವಿಶ್ವಾಸ ತುಂಬಿದರು. ತಾವೇ ಪಿಪಿಇ ಕಿಟ್ ಧರಿಸಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ 131 ಸೋಂಕಿತರ ಸಮಸ್ಯೆ, ಪರಿಸ್ಥಿತಿ ಹಾಗೂ ಆರೋಗ್ಯ ವಿಚಾರಿಸಿದರು.

ಜಾಹಿರಾತು
ಆ ಮೂಲಕ ಸೋಂಕಿತನ್ನು ನೇರವಾಗಿ ಸಂಪರ್ಕಿಸಿ, ಅವರ ಕುಂದುಕೊರತೆ ಆಲಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದ ಮೊದಲ ರಾಜಕಾರಣಿ ಎನಿಸಿದ್ದಾರೆ. ಕೊರೋನಾ ಸೋಂಕಿತರನ್ನು ಸಮಾಜದಲ್ಲಿ ತಿರಸ್ಕಾರ ಹಾಗೂ ಆತಂಕದಿಂದ ನೋಡುವ ಈ ಸಂದರ್ಭದಲ್ಲಿ ಸಂಸದರ ಈ ನಡೆ ಸಮಾಜಕ್ಕೂ ಒಂದು ಸಂದೇಶ ರವಾನಿಸಿದೆ. ಗೊತ್ತಿದ್ದೋ, ಗೊತ್ತಿಲ್ಲದೆಯೂ ಸೋಂಕು ತಗುಲಿದೆ. ಯಾರೂ ಇದು ಬರಲಿ ಎಂದು ಬಯಸುವುದಿಲ್ಲ. ಬಂದಾಗ ಧೈರ್ಯದಿಂದ ಎದುರಿಸದೇ ವಿಧಿಯಿಲ್ಲ. ಆದರೆ ಎಲ್ಲರೂ ಒಟ್ಟಾಗಿ ಇದನ್ನು ಎದುರಿಸಬೇಕೆ ಹೊರತು ಅವರನ್ನು ಉಪೇಕ್ಷೆ ಮಾಡುವುದು ಸಲ್ಲದು ಎಂಬ ಸಂದೇಶವನ್ನು ಸುರೇಶ್ ರವಾನಿಸಿದ್ದಾರೆ.
ಈ ಸಂದರ್ಭದಲ್ಲಿ ಸೋಂಕಿತರೊಂದಿಗೆ ಮಾತುಕತೆ ನಡೆಸಿದ ಸುರೇಶ್ ಅವರು, ಸೋಂಕಿತರಾಗಿದ್ದೇವೆ ಎಂದು ಹೆದರಬೇಡಿ. ನಿಮಗೆ ಅಗತ್ಯ ಚಿಕಿತ್ಸೆ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗುವುದು. ನಿಮ್ಮ ಜತೆ ನಾನಿದ್ದೇನೆ. ನಿಮಗೆ ಬೇಕಾದುದು ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು. ಜತೆಗೆ ಸೋಂಕು ಕುರಿತು ಅವರಲ್ಲಿರುವ ಭಯ ತೊಡೆದುಹಾಕುವ ಪ್ರಯತ್ನ ಮಾಡಿದರು. ಜತೆಗೆ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಇದೇ ವೇಳೆ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಜತೆಗೂ ಮಾತುಕತೆ ನಡೆಸಿದ ಸುರೇಶ್ ಅವರು, ಅವರ ಸೇವೆಯನ್ನು ಶ್ಲಾಘಿಸುವುದರ ಜತೆಗೆ ಅವರಿಗೂ ಆತ್ಮ ವಿಶ್ವಾಸ ತುಂಬಿದರು. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಷ್ಟೋ ಆಸ್ಪತ್ರೆಗಳು ಹಿಂದೇಟು ಹಾಕುತ್ತಿರುವ ಹೊತ್ತಲ್ಲಿ, ಅವರ ಕರ್ತವ್ಯಕ್ಷಮತೆಯನ್ನು ಸಂಸದರು ಕೊಂಡಾಡಿದರು. ‘ನೀವು ಕೇವಲ ಹೆಸರಿಗಷ್ಟೇ ಅಲ್ಲ, ನಿಜವಾಗಿಯೂ ವಾರಿಯರ್ಸ್. ನಿಮ್ಮ ಪರಿಶ್ರಮ ಹಾಗೂ ಆರೈಕೆಯಿಂದಾಗಿ ಅನೇಕರು ಮರುಜನ್ಮ ಪಡೆಯುತ್ತಿದ್ದಾರೆ. ನೀವು ಕೂಡ ಯಾವುದಕ್ಕೂ ಹೆದರಬೇಡಿ. ನಿಮ್ಮ ಜತೆ ನಾನಿದ್ದೇನೆ’ ಎಂದು ಅವರಿಗೂ ಧೈರ್ಯ ಹೇಳಿದರು.