ಭಿಕ್ಷೆ ಎತ್ತಿಯಾದ್ರೂ ನಿಮಗೆ ಹಣ ಕೊಡ್ತೀನಿ, ಕಾರ್ಮಿಕರನ್ನು ಅವರ ಊರಿಗೆ ಸೇರಿಸಿ : ಡಿಕೆಶಿ

ಬೆಂಗಳೂರು : (ಮೇ.02) ಸನ್ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಎಷ್ಟು ದುಡ್ಡು ಬೇಕು ಹೇಳಿ, ಕೆಪಿಸಿಸಿ ವತಿಯಿಂದ ನಾನು ಕಟ್ಟಿ ಕೊಡುತ್ತೇನೆ. ಆದರೆ ಕಂಗಾಲಾಗಿರುವ ಈ ಪ್ರಯಾಣಿಕರು ಸುರಕ್ಷಿತವಾಗಿ ಅವರ ಊರಿಗೆ ಹೋಗಲು ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Dk shivakumar

ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ತಮ್ಮ ಸ್ವಂತ ಊರಿಗೆ ಮರಳಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ನಿಲ್ದಾಣಕ್ಕೆ ಶನಿವಾರ ಸಾವಿರಾರು ಪ್ರಯಾಣಿಕರು ಆಗಮಿಸಿದ್ದರು. ಆದರೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಬೆಳಗ್ಗೆಯಿಂದ ಊಟ ತಿಂಡಿ ಇಲ್ಲದೇ ಇಲ್ಲದೇ ಇವರೆಲ್ಲರೂ ಪರದಾಡಿದ್ದಾರೆ. ಈ ವಿಚಾರವಾಗಿ ನೂರಾರು ದೂರವಾಣಿ ಕರೆಗಳು ತಮಗೆ ಬಂದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಖುದ್ದು ಸ್ಥಳಕ್ಕೆ ಬಂದು ಪರಿಸ್ಥಿತಿ ವೀಕ್ಷಿಸಿದರು. ಬೆಳಗ್ಗೆಯಿಂದ ಊಟ ತಿಂಡಿ ಇಲ್ಲದೇ ಬಸ್ ಗಾಗಿ ಕಾಯುತ್ತಿರುವ ಕಾರ್ಮಿಕರ ಪರದಾಟ ನೋಡಿ ಮರುಗಿದರು. ಅವರ ಸಮಸ್ಯೆ ಆಲಿಸಿ ದಂಗು ಬಡಿದು ಹೋದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಈ ಸರ್ಕಾರಕ್ಕೆ ಒಂದು ಸಣ್ಣ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದಲ್ಲಿ ಪ್ಲಾನಿಂಗ್ ಅನ್ನೋದೆ ಇಲ್ಲ. ಘಳಿಗೆಗೊಂದು ನಿರ್ಧಾರ ಮಾಡುತ್ತದೆ. ನಂತರ ಅದನ್ನು ಬದಲಿಸುತ್ತದೆ. ತಮ್ಮ ಊರಿಗೆ ಹೋಗಲು ಸುಮಾರು 15-20 ಕಿ.ಮೀ. ದೂರದಿಂದ ನಡೆದುಕೊಂಡು ಬಂದಿದ್ದಾರೆ. ಕೆಲವು ಹೆಣ್ಣು ಮಕ್ಕಳು ತಮ್ಮ ಪಿಜಿ, ಹಾಸ್ಟೆಲ್ ಗಳನ್ನು ಖಾಲಿ ಮಾಡಿಕೊಂಡು ಬಂದಿದ್ದಾರೆ. ಕೆಲವರು ದುಡ್ಡನ್ನೂ ಕಟ್ಟಿದ್ದಾರೆ. ಕನಿಷ್ಠ 20-30 ಮಂದಿ ಇದ್ದರೆ ಮಾತ್ರ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದ ಸರಕಾರ ಈಗ ಎಲ್ಲವನ್ನು ರದ್ದು ಮಾಡಿದೆ.

Dk shivakumar

ಮಾನ್ಯ ಮುಖ್ಯಮಂತ್ರಿಗಳೇ ಇವರೆಲ್ಲಾ ಈಗ ಎಲ್ಲಿಗೆ ಹೋಗಬೇಕು? ಇವರ ರಕ್ಷಣೆ ಮಾಡುವವರು ಯಾರು? ಇವರನ್ನು ಅವರ ಊರಿಗೆ ಉಚಿತವಾಗಿ ಕಳುಹಿಸಲು ಎಷ್ಟು ದುಡ್ಡು ಬೇಕು ಹೇಳಿ. ನಾನು ಭಿಕ್ಷೆ ಬೇಡಿಯಾದ್ರೂ ಅದನ್ನು ಕಟ್ಟುತ್ತೇನೆ. ಅನೇಕ ದಾನಿಗಳು, ನಮ್ಮ ಪಕ್ಷದ ನಾಯಕರು ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಒಬ್ಬೊಬ್ಬರಿಗೆ ಐನೂರೋ, ಸಾವಿರವೋ ಈ ಬಡ ಜನರ ಪ್ರಯಾಣ ವೆಚ್ಚವನ್ನು ನಾವೇ ಭರಿಸುತ್ತೇವೆ.

ನಮ್ಮ ರಾಜ್ಯದಲ್ಲಿ ಬಿಜೆಪಿಯ 26 ಸಂಸದರಿದ್ದಾರೆ. ರೈಲ್ವೇ ಸಚಿವರೂ ನಮ್ಮ ರಾಜ್ಯದವರೇ ಆಗಿದ್ದಾರೆ. ಗುಜರಾತ್ ಸೇರಿ ಬೇರೆ ರಾಜ್ಯಗಳಲ್ಲಿ ಶ್ರಮಿಕ್ ರೈಲು ಎಂದು ಬಿಟ್ಟಿದ್ದಾರಲ್ಲಾ, ಅದೇ ರೀತಿ ನಮ್ಮ ರಾಜ್ಯದಲ್ಲೂ ರೈಲು ವ್ಯವಸ್ಥೆ ಕಲ್ಪಿಸಲು ಈ ಸಂಸದರಿಂದ ಸಾಧ್ಯವಾಗುತ್ತಿಲ್ಲ. ಸೋಂಕು ತೀವ್ರತೆ ಇದ್ದಾಗ ಗುಜರಾತ್ ಗೆ 1800 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಉತ್ತರಾಖಂಡದಲ್ಲಿ ಪ್ರವಾಸಿಗರಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಕೇರಳ, ರಾಜಸ್ಥಾನ ಸೇರಿದಂತೆ ಬೇರೆ ರಾಜ್ಯಗಳಿಗೆ ವಿದೇಶಗಳಿಂದ 10 ವಿಶೇಷ ವಿಮಾನದಲ್ಲಿ ಜನರನ್ನು ಕರೆದುಕೊಂಡು ಬರಲಾಗಿದೆ. ತೆಲಂಗಾಣದಲ್ಲಿ ಉಚಿತ ಪಾಸ್ ನೀಡುತ್ತಿದ್ದಾರೆ. ಜಾರ್ಖಂಡ್, ಕೇರಳ ಹೀಗೆ ಚಿಕ್ಕ ಚಿಕ್ಕ ರಾಜ್ಯಗಳು ತಮ್ಮ ಕಾರ್ಮಿಕರ ನೆರವಿಗೆ ಬಂದಿವೆ. ಆದರೆ ನಿಮಗೇನು ಬಂದಿದೆ ಮುಖ್ಯಮಂತ್ರಿಗಳೇ? ಈ ಬಡ ಕಾರ್ಮಿಕರು, ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿರುವುದೇಕೆ? ಸುಮಾರು 200 ಬಸ್ ವ್ಯವಸ್ಥೆ ಕಲ್ಪಿಸಿದರೆ ಸಾಕು ಇಲ್ಲಿನ ಎಲ್ಲ ಕಾರ್ಮಿಕರು ತಮ್ಮ ಊರು ಸೇರಿಕೊಳ್ಳುತ್ತಾರೆ.

Dk shivakumar

ತಮ್ಮ ಗಂಟು-ಮೂಟೆ ಕಟ್ಟಿಕೊಂಡು ಬಂದಿರುವ ಹೆಣ್ಣುಮಕ್ಕಳು ರಾತ್ರಿ ಎಲ್ಲಿ ಹೋಗುತ್ತಾರೆ? ಅವರು ಉಳಿದುಕೊಳ್ಳಲು ಏನು ವ್ಯವಸ್ಥೆ ಕಲ್ಪಿಸಿದ್ದೀರಿ? ಇವರೆಲ್ಲ ಎಲ್ಲಿ ಹೋಗಬೇಕು? ಮುಖ್ಯಮಂತ್ರಿಗಳೇ ನಿಮ್ಮ ಸಚಿವರನ್ನು ಕಳಿಸಿ. ಇವರ ಕಷ್ಟ ಏನು ಅಂತಾ ಕೇಳುವಂತೆ ಮಾಡಿ. ಸರಿಯಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದ ಮೇಲೆ ಇವರನ್ನು ಊರಿಗೆ ಕಳುಹಿಸಲಾಗುವುದು ಎಂದು ಕರೆ ನೀಡಿದ್ದಾದರೂ ಏಕೆ? ಸರ್ಕಾರದಲ್ಲಿ 30 ಮಂತ್ರಿಗಳಿದ್ದಾರೆ. ಸರ್ಕಾರ ಇದೆ ಯಾರಾದರೂ ಬಂದು ಇವರಿಗೆ ಸಾಂತ್ವಾನ ಹೇಳಿ, ಬಸ್ ವ್ಯವಸ್ಥೆ ಮಾಡಿದರೆ ಈ ಸಮಸ್ಯೆಯೇ ಇರುವುದಿಲ್ಲ. ಕೂಡಲೇ ಇವರಿಗೆ ಬಸ್ ವ್ಯವಸ್ಥೆ ಕಲ್ಪಿಸಿ, ಊರಿಗೆ ಕಳುಹಿಸಿ ಅಥವಾ ಇವರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನಾದರೂ ಮಾಡಿ. ಈ ಹೆಣ್ಣುಮಕ್ಕಳಿಗೆ ಪೊಲೀಸ್ ಭದ್ರತೆ ಒದಗಿಸಿ. ಇಲ್ಲಿರುವ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿ ಎಂದು ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಶನಿವಾರ ಸಂಜೆ ಭೇಟಿ ನೀಡಿ ಪ್ರಯಾಣಿಕರ ಬವಣೆಯನ್ನು ವೀಕ್ಷಿಸಿ, ಆಲಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಜತೆಗಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!