ಯೆಸ್ ಬ್ಯಾಂಕ್ ಬಿಕ್ಕಟ್ಟು 2017ರಲ್ಲಿಯೇ ಗಮನಕ್ಕೆ ಬಂದಿತ್ತು : ನಿರ್ಮಲಾ ಸೀತಾರಾಮನ್

ನವದೆಹಲಿ : (ಮಾ.06) ಯೆಸ್ ಬ್ಯಾಂಕ್ ಬಿಕ್ಕಟ್ಟು ಡಿಢೀರ್ ಸಂಭವಿಸಿದ್ದೇನೂ ಅಲ್ಲ. 2017ರಿಂದಲೇ ನಾವು ಬ್ಯಾಂಕ್ ಮೇಲೆ ನಿಗಾ ಇರಿಸಿದ್ದೆವು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Yes bank
2018ರಲ್ಲಿ ಸೂಕ್ಷ್ಮ ಪರಿಶೀಲನೆ ಮಾಡಿದ ನಂತರ ಆರ್‌ಬಿಐ ಯೆಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬದಲಿಸಲು ಶಿಫಾರಸು ಮಾಡಿತ್ತು. ಇದರ ಫಲವಾಗಿ ಸೆಪ್ಟೆಂಬರ್ 2018ರಲ್ಲಿ ಹೊಸ ಸಿಇಒ ನೇಮಕ ಮಾಡಲಾಗಿತ್ತು. ಅಂದಿನಿಂದಲೇ ಬ್ಯಾಂಕ್‌ನ ಹಣಕಾಸು ಪರಿಸ್ಥಿತಿ ಸರಿಪಡಿಸುವ ಕಾರ್ಯ ಆರಂಭವಾಗಿತ್ತು. ಬ್ಯಾಂಕ್‌ಗೆ ₹1 ಕೋಟಿ ದಂಡವನ್ನೂ ವಿಧಿಸಿದ್ದೆವು.

ಸೆಪ್ಟೆಂಬರ್ 2019ರಲ್ಲಿ ಆಂತರಿಕ ವ್ಯವಹಾರಗಳ ಬಗ್ಗೆ ‘ಸೆಬಿ’ ತನಿಖೆಯನ್ನೂ ಆರಂಭಿಸಿತ್ತು ಎಂದು ನಿರ್ಮಲಾ ಹೇಳಿದ್ದಾರೆ. ಹಣಕಾಸು ಪರಿಸ್ಥಿತಿ ಸುಧಾರಿಸಲು ಪ್ರಾಮಾಣಿಕ ಪ್ರಯಕ್ನ ಮಾಡುತ್ತಲೇ ಇದ್ದೇವೆ ಎಂದು ಬ್ಯಾಂಕ್ ವ್ಯವಸ್ಥಾಪಕರು ಹೇಳುತ್ತಲೇ ಇದ್ದರು. ಆದರೆ ಯಾವುದೂ ಫಲಕಾರಿಯಾಗಿಲ್ಲ. ಯೆಸ್ ಬ್ಯಾಂಕ್ ಪುನಶ್ಚೇತನಕ್ಕಾಗಿ ಆರ್‌ಬಿಐ ಕೆಲವು ಕ್ರಮಗಳನ್ನು ಕೈಗೊಂಡಿದೆ. ಅದರ ಪ್ರಕಾರ ಠೇವಣಿದಾರರು ತಮ್ಮ ಖಾತೆಯಿಂದ ಹಣ ಹಿಂಪಡೆಯಲು ಮಿತಿ ವಿಧಿಸಲಾಗಿದೆ.

Nirmala sitharaman

ಕಳೆದ ಆರು ತಿಂಗಳಿನಿಂದ ನಾವು ಪ್ರತಿನಿತ್ಯ ಬ್ಯಾಂಕ್ ವಹಿವಾಟುಗಳ ಮೇಲೆ ನಿಗಾ ಇರಿಸಿದ್ದೇವೆ. ಆರ್‌ಬಿಐ ಹೊಸ ಕ್ರಮಗಳನ್ನು ಕೈಗೊಳ್ಳುವ ಮೂಲಕ ಶೀಘ್ರವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದೆ. ಆರ್‌ಬಿಐ ಮತ್ತು ಸರ್ಕಾರ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತಿದೆ ಎಂದು ನಾನು ಠೇವಣಿದಾರರಿಗೆ ಮತ್ತು ಹೂಡಿಕೆದಾರರಿಗೆ ಭರವಸೆ ನೀಡುತ್ತಿದ್ದೇನೆ. ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಸಚಿವೆ ಹೇಳಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!