ಯುನಿವೆಫ್ ಪ್ರತಿಷ್ಠಿತ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ಮುಹಮ್ಮದ್ ಗುಂಡಿಕುಮೇರು ರಿಗೆ

ಮಂಗಳೂರು : (ನ.10) ಇತಿಹಾಸ ಬಲ್ಲವರು ಮಾತ್ರ ಇತಿಹಾಸ ನಿರ್ಮಿಸ ಬಲ್ಲರು. ಅತ್ಯುಜ್ವಲ ಇಸ್ಲಾಮೀ  ಇತಿಹಾಸದ ಅಧ್ಯಯನ ದಿಂದ ಹಾಗು ಇತಿಹಾಸ ಪುರುಷರ ಅನುಕರಣೆಯಿಂದ ಮುಸ್ಲಿಮ್ ಸಮುದಾಯದ ಗತ ವೈಭವದ ಕಾಲ ಮರಳಿಬರುವುದು” ಎಂದು ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ‌ ಹೇಳಿದರು.

Advertising

ಅವರು ಕಳೆದ ಶನಿವಾರ ರಾತ್ರಿ ಗುಂಡಿಕುಮೇರು ಕರಿಯಂಗಳ ನೂರುಲ್ ಇಸ್ಲಾಮ್ ಜುಮಾಮಸೀದಿ ವಠಾರದಲ್ಲಿ ಯುನಿವೆಫ಼್ ಕರ್ನಾಟಕ ಪ್ರತಿ ವರ್ಷ ನೀಡುವ ಪ್ರತಿಷ್ಟಿತ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ಯನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು. ಈ ಬಾರಿ ಸಮಾಜಸೇವಕ, ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಗುಂಡಿಕುಮೇರಿನ ಮುಹಮ್ಮದ್ ಯಾನೆ ಅಬ್ಬಾಸ್ ರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.

Mangalore

ಜವಳಿ ವ್ಯಾಪಾರಿ ದಿವಂಗತ ಕೆ.ಎಸ್. ಸಯ್ಯದ್ ಮತ್ತು ಜೈನಾಬು ದಂಪತಿಗಳ  ಪುತ್ರನಾಗಿರುವ ಮುಹಮ್ಮದ್ ಯಾನೆ ಅಬ್ಬಾಸ್ ಸ್ವತಃ ಪೋಲಿಯೋ ಪೀಡಿತರಾಗಿದ್ದರೂ ಕಳೆದ 20 ವರ್ಷಗಳಿಂದ  ನಿಸ್ವಾರ್ಥ  ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸರಕಾರದಿಂದ ಬಡ ಒಕ್ಕಲಿಗರಿಗೆ ಹಕ್ಕು ಪತ್ರ ದೊರಕಿಸಿಕೊಡುವ ಮೂಲಕ ಇಲ್ಲಿನ ಸುಮಾರು 25 ಕುಟುಂಬಗಳಿಗೆ ಆಶ್ರಯದಾತರಾಗಿದ್ದಾರೆ. ರೇಶನ್ ಕಾರ್ಡ್, ಮತದಾರರ ಗುರುತು ಪತ್ರ, ಆಧಾರ್ ಕಾರ್ಡ್ ಮುಂತಾದ ಎಲ್ಲಾ ಸರಕಾರಿ ದಾಖಲೆಗಳನ್ನು ಹಾಗೂ ಸರಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹಗಲಿರುಳೂ ಶ್ರಮಿಸುತ್ತಾರೆ.
Advertising
ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಲ್ಲಿಪಾಡಿ ಇದರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ  ಶ್ರೀಯುತರು ಪ್ರಸ್ತುತ  ಕರಿಯಂಗಳದ ನೂರುಲ್ ಇಸ್ಲಾಮ್ ಜುಮಾ ಮಸೀದಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಹವಾಗಿಯೇ ಇವರು ಯುನಿವೆಫ಼್ ಕರ್ನಾಟಕದ 2019 ರ ಸಾಲಿನ “ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ” ಗೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ₹5000 ನಗದು ಹಾಗೂ ಸನ್ಮಾನ ಪತ್ರವನ್ನೊಳಗೊಂಡಿದೆ.

ನೂರುಲ್ ಇಸ್ಲಾಮ್ ಮಸೀದಿ ಅಧ್ಯಕ್ಷ ಮುಹಮ್ಮದ್ ಬಶೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ಸಂಚಾಲಕ ಯು,ಕೆ. ಖಾಲಿದ್ ಸನ್ಮಾನ ಪತ್ರ ವಾಚಿಸಿದರು. ಯುನಿವೆಫ಼್ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಪಾರೆ, ಕುದ್ರೋಳಿ ಶಾಖಾಧ್ಯಕ್ಷ ಸೈಫ಼ುದ್ದೀನ್, ನೂರುಲ್ ಇಸ್ಲಾಮ್ ಮಸೀದಿಯ ಪದಾಧಿಕಾರಿಗಳಾದ ಉಬೈದುಲ್ಲಾ ಫ಼ೈಝಿ ಇರ್ಫಾನಿ, ಉಪಾಧ್ಯಕ್ಷ ಕೆ. ಉಸ್ಮಾನ್, ಕಾರ್ಯದರ್ಶಿ ಕೆ.ಎಲ್. ಅಬ್ದುಲ್ ರಹ್ಮಾನ್, ಮಾಜಿ ಕಾರ್ಯದರ್ಶಿಗಳಾದ ಕೆ.ಹೆಚ್. ಮುಹಮ್ಮದ್ ರಶೀದ್ ಮತ್ತು ಕೆ. ಹೆಚ್. ಅಬೂಬಕರ್, ಮಾಜಿ ಅಧ್ಯಕ್ಷರುಗಳಾದ ಮುಹಮ್ಮದ್ ಶಾಫ಼ಿ ಮುಸ್ಲಿಯಾರ್ ಮತ್ತು ಕೆ. ಹೆಚ್. ಸೈಯ್ಯದ್ ಅಲಿ, ಮಸೀದಿಯ ಖತೀಬ್ ಯಾಹ್ಯಾ ಫೈಝಿ, ಸದರ್ ಮುಅಲ್ಲಿಮ್ ಹಂಝ ಮುಸ್ಲಿಯಾರ್ ಮತ್ತು ಮುಅದ್ಧಿನ್ ಮಾಮು ಉಸ್ತಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!