ಕೊರೊನಾ ಮೃತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಆದರ್ಶ ಮೆರೆದ ಸಂಸದ ಡಿ.ಕೆ ಸುರೇಶ್.

 

ಕನಕಪುರ : (ಜು.19) ಕೋವಿಡ್ 19 ಹಾಗೂ ಸೋಂಕಿನಿಂದ ಬಲಿಯಾದವರ ಅಂತ್ಯ ಸಂಸ್ಕಾರದ ಕುರಿತು ಜನರಲ್ಲಿರುವ ಅಪನಂಬಿಕೆ ಮತ್ತು ಅಪಪ್ರಚಾರಗಳನ್ನು ತೊಡೆದು ಹಾಕಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ ಸುರೇಶ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಕ್ಷೇತ್ರದ ವ್ಯಾಪ್ತಿಯ ಕನಕಪುರದ ನಿವಾಸಿ 73 ವರ್ಷ ವಯಸ್ಸಿನ ನರಸಿಂಹ ಶೆಟ್ಟಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸುರೇಶ್ ಅವರು ಆದರ್ಶ ಮೆರೆದಿದ್ದಾರೆ.

Dk suresh

ಮೃತರ ಅಂತ್ಯಸಂಸ್ಕಾರವನ್ನು ಕನಕಪುರ ದೇಗುಲಮಠದ ಬಳಿಯಿರುವ ಸ್ಮಶಾನದಲ್ಲಿ ಎಲ್ಲಾ ವಿಧಿ-ವಿಧಾನಗಳ ಪ್ರಕಾರ ಗೌರವಯುತವಾಗಿ ನೆರವೇರಿಸಲು ಸಹಕರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ಪ್ರತಿಯೊಬ್ಬರೂ ಅಗತ್ಯ ಸುರಕ್ಷಾ ಪರಿಕರಗಳಾದ ಪಿಪಿಇ ಕಿಟ್ ಬಳಸಿ ಪಾಲ್ಗೊಂಡಿದ್ದರು. ವಿಧಾನ ಪರಿಷತ್ ಸದಸ್ಯ ರವಿ ಹಾಗೂ ಕನಕಪುರ ನಗರಸಭೆ ಸದಸ್ಯರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

Dk suresh

ಇತ್ತೀಚೆಗೆ ಕೊರೋನಾ ಸೋಂಕಿತರನ್ನು ಸಮಾಜ ಕೀಳಾಗಿ ನೋಡುತ್ತಿರುವ ಹಿನ್ನೆಲೆಯಲ್ಲಿ ತಾವೇ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಜತೆ ಮಾತನಾಡಿ ಸಮಾಜಕ್ಕೆ ಸಕಾರಾತ್ಮಕ ಸಂದೇಶ ರವಾನಿಸಿದ್ದ ಸುರೇಶ್ ಅವರು, ಈಗ ಸೋಂಕಿನಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯ ಸಂಸ್ಕಾರ ಆಗುವಂತೆ ನೋಡಿಕೊಂಡಿದ್ದಾರೆ. ಈ ವಿಚಾರವಾಗಿ ಇತ್ತೀಚೆಗಷ್ಟೇ ಬಹಿರಂಗ ಪತ್ರ ಬರೆದಿದ್ದ ಸುರೇಶ್ ಅವರು, ‘ಕೊರೊನ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಗಳಿಂದ ಸಮಾಜಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ವಿಷಯದಲ್ಲಿ ಬರೀ ಊಹಾಪೋಹಗಳನ್ನು ಹಬ್ಬಿಸಲಾಗಿದೆ. ಹೀಗಾಗಿ ಶವ ಸಂಸ್ಕಾರಕ್ಕೆ ಪ್ರತಿರೋಧ ಒಡ್ಡುವುದಾಗಲಿ, ಅಡ್ಡಿಪಡಿಸುವುದಾಗಲಿ ನಮ್ಮ ಸಂಸ್ಕೃತಿಯೂ ಅಲ್ಲ, ಸದಾಚಾರವೂ ಅಲ್ಲ. ಆದ್ದರಿಂದ ಆಯಾ ಪ್ರದೇಶಗಳಲ್ಲಿ ಕೋವಿಡ್ ನಿಂದ ಮರಣ ಹೊಂದಿದ ವ್ಯಕ್ತಿಗಳ ಬಂಧುಗಳು ಹಾಗೂ ಗ್ರಾಮಸ್ಥರು ನಿರಾತಂಕವಾಗಿ, ಮೃತ ವ್ಯಕ್ತಿಗೆ ಗೌರವಯುತ ಅಂತಿಮ ಸಂಸ್ಕಾರ ನೆರವೇರಲು ಅವಕಾಶ ಮಾಡಿಕೊಡಬೇಕು. ಆ ಮೂಲಕ ಮಾನವೀಯತೆ ಮತ್ತು ಸೌಹಾರ್ದತೆ ಮೆರೆಯಬೇಕು’ ಎಂದು ಮನವಿ ಮಾಡಿದ್ದರು.

Dk suresh

ನರಸಿಂಹ ಶೆಟ್ಟಿಯವರ ಅಂತ್ಯ ಸಂಸ್ಕಾರದ ನಂತರ ಮಾತನಾಡಿದ ಸುರೇಶ್ ಅವರು, ನರಸಿಂಹ ಶೆಟ್ಟಿಯವರು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಜೀವ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ವರ್ಗದವರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!