ಸರ್ಕಾರದ ಅನುಮತಿ ನಂತರ ಪದಗ್ರಹಣ, ‘ಪ್ರತಿಜ್ಞಾ’ ಕಾರ್ಯಕ್ರಮ : ಡಿ.ಕೆ. ಶಿವಕುಮಾರ್

ಬೆಂಗಳೂರು : (ಜೂ.1) ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿಯಲ್ಲಿ ಜೂನ್ 8 ನೇ ತಾರೀಖಿನವರೆಗೂ ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಸರ್ಕಾರ ಅನುಮತಿ ನೀಡಿದ ನಂತರ ಪದಗ್ರಹಣ ‘ಪ್ರತಿಜ್ಞಾ’ ಕಾರ್ಯಕ್ರಮ ಜರುಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಡಿ.ಕೆ. ಶಿವಕುಮಾರ್, ಇದೇ ತಿಂಗಳು 7ರಂದು ನಡೆಸಲು ಉದ್ದೇಶಿಸಲಾಗಿದ್ದ ಪದಗ್ರಹಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು. ನನಗೆ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ನೀಡಿದ ಘಳಿಗೆಯಿಂದಲೇ ನಾನು ನನ್ನ ಕೆಲಸ ಆರಂಭಿಸಿದ್ದೇನೆ. ನಂತರ ಕೊರೋನಾ ಸೋಂಕು ಎದುರಾಗಿದ್ದು, ಎಲ್ಲ ಹಿರಿಯ ನಾಯಕರ ಸಹಕಾರದೊಂದಿಗೆ ಪಕ್ಷದ ಕಾರ್ಯಕರ್ತರಿಗೆ ಅಗತ್ಯ ಮಾರ್ಗದರ್ಶನ ನೀಡಿ ನನ್ನ ಕೆಲಸ ಮುಂದುವರೆಸಿದ್ದೇನೆ.

Dk shivakumar

ಕೋವಿಡ್ ಸಮಯದಲ್ಲಿ ಯಾವುದೇ ರಾಜಕೀಯ ಸಮಾರಂಭ ನಡೆಸಬಾರದು ಎಂದು ಸರ್ಕಾರ ಆದೇಶ ನೀಡಿದೆ. ಕಳೆದ ಎರಡೂವರೆ ತಿಂಗಳಿಂದ ನಮ್ಮ ಹೋರಾಟ ನಡೆಯುತ್ತಿದ್ದು, ಮಾನವ ಸೇವೆಗಾಗಿ, ಮಾನವೀಯತೆಯಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಸರ್ಕಾರ ವಿಫಲವಾದಾಗ ಪ್ರತಿಪಕ್ಷವಾಗಿ ಎಲ್ಲ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುವುದು ಒಂದು ಪದ್ಧತಿ. ಧ್ವಜ ಹಸ್ತಾಂತರದ ಮೂಲಕ ಇದು ನಡೆಯುತ್ತದೆ. ನಮ್ಮ ಎಲ್ಲ ನಾಯಕರ ಜತೆ ಸೇರಿ ಸರಳ ಹಾಗೂ ವಿನೂತನ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಬೆಂಗಳೂರಿನಲ್ಲಿ ಸಾಂಕೇತಿಕವಾಗಿ 150 ಮಂದಿ ಸೇರಿ ಕಾರ್ಯಕ್ರಮ ಮಾಡುತ್ತೇವೆ. ಉಳಿದಂತೆ ಎಲ್ಲ ಪಂಚಾಯ್ತಿಗಳಲ್ಲಿ, ವಾರ್ಡ್ ಗಳಲ್ಲಿ ಸೇರಿ ಸುಮಾರು 7800 ಕಡೆಗಳಲ್ಲಿ ಏಕಕಾಲದಲ್ಲಿ “ವಂದೇ ಮಾತರಂ” ದೇಶಭಕ್ತಿ ಗೀತೆಯಿಂದ ಪ್ರಾರಂಭ ಮಾಡಿ ಸಂವಿಧಾನದ ಪೀಠಿಕೆ ವಾಚನದೊಂದಿಗೆ ಪ್ರತಿಜ್ಞೆ ಸ್ವೀಕಾರ ಜರುಗಲಿದೆ.

Dk shivakumar

ಸಾಮಾಜಿಕ ಅಂತರ ಕಾಯ್ದುಕೊಂಡು ದೇಶದ ಹಾಗೂ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಿ ಟಿವಿಯಲ್ಲಿ ನೇರ ಪ್ರಸಾರ ಮಾಡಿಸಲಾಗುವುದು. ಎಲ್ಲ ಕಡೆಯೂ ಕಾರ್ಯಕ್ರಮಗಳನ್ನು ಜೂಮ್ ಮೂಲಕ ನೇರ ಪ್ರಸಾರ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ಲಕ್ಷಂತರ ಜನರನ್ನು ಸೇರಿಸಿ, ಟ್ರಾಫಿಕ್ ಮತ್ತಿತರ ಸಮಸ್ಯೆ ಸೃಷ್ಟಿಸುವುದನ್ನು ತಡೆಯಲು ಹಾಗೂ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳು 7ರಂದು ಕಾರ್ಯಕ್ರಮ ಮಾಡಲು ಮುಖ್ಯಮಂತ್ರಿಗಳು, ಪೊಲೀಸ್ ಆಯುಕ್ತರಿಗೆ ಅನುಮತಿ ಕೇಳಿ, ಮನವಿ ಮಾಡಿದ್ದೆವು. ಆದರೆ ಈಗ ಹೊಸ ಮಾರ್ಗಸೂಚಿ ಹೊರಬಿದ್ದಿದೆ‌. ಇದರ ಹಿಂದೆ ರಾಜಕೀಯ ಹುನ್ನಾರವಿದೆ. ಈ ಕಾರ್ಯಕ್ರಮಕ್ಕೆ ನಾವು “ಪ್ರತಿಜ್ಞಾ” ಎಂದು ಹೆಸರಿಟ್ಟಿದ್ದೇವೆ. ಸರ್ಕಾರ ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ನಾನು ನಿಮಗೆ ಹೊಸ ದಿನಾಂಕ ತಿಳಿಸುತ್ತೇನೆ. ಹೀಗಾಗಿ ನಾನು ದಿನಾಂಕದ ವಿಚಾರದಲ್ಲಿ ಈವರೆಗೂ ಎಲ್ಲಿಯೂ ಘೋಷಣೆ ಮಾಡಿರಲಿಲ್ಲ ಎಂದರು. ಈ ಸಂದರ್ಭದಲ್ಲಿ  ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಂಸದ ವಿ. ಎಸ್ ಉಗ್ರಪ್ಪ  ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!